ಜೂ.15ಕ್ಕೆ ‘ಲೈಫ್ ಆ್ಯಂಡ್ ಆರ್ಟ್ ಆಫ್ ಕೆ.ಕೆ.ಹೆಬ್ಬಾರ್’ ಕೃತಿ ಬಿಡುಗಡೆ

Update: 2021-06-12 14:48 GMT

ಮಣಿಪಾಲ, ಜೂ.12: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಸಂಸ್ಥೆಯು ಉಡುಪಿ ಮೂಲದ ವಿಶ್ವವಿಖ್ಯಾತ ಚಿತ್ರಕಲಾವಿದ ಕೆ. ಕೆ. ಹೆಬ್ಬಾಾರ್ (ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ಅವರ 110ನೆಯ ಜನ್ಮದಿನೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ‘ಸೆಲಬ್ರೇಟಿಂಗ್ ಹೆಬ್ಬಾರ್’ ಎಂಬ ಶೀರ್ಷಿಕೆಯೊಂದಿಗೆ ಆಚರಿಸಲಿದೆ.

ಈ ಸಂದರ್ಭದಲ್ಲಿ ಮಾಹೆಯ ಯೂನಿವರ್ಸಲ್ ಪ್ರೆಸ್ (ಎಂಯುಪಿ) ‘ಲೈಫ್ ಆ್ಯಂಡ್ ಆರ್ಟ್ ಆಫ್ ಕೆ. ಕೆ. ಹೆಬ್ಬಾರ್’ ಕೃತಿಯನ್ನು ಮತ್ತು ಮಣಿಪಾಲ ದ ಕೆ.ಕೆ.ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್ ನಿರ್ಮಿಸಿರುವ ಎರಡು ಸಾಕ್ಷ್ಯಚಿತ್ರಗಳನ್ನು ಜೂ.15ರ ಮಂಗಳವಾರ ಲೋಕಾರ್ಪಣೆ ಮಾಡಲಾಗುತ್ತಿದೆ.

ವರ್ಚುವಲ್ ಆಗಿ ನಡೆಯಲಿರುವ ಸಮಾರಂಭದಲ್ಲಿ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ವರಿಷ್ಠರು ಹಾಗೂ ಕೆ.ಕೆ.ಹೆಬ್ಬಾರ್ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮ ಜೂ.15ರ ಸಂಜೆ 6:30ಕ್ಕೆ ಪ್ರಾರಂಭ ಗೊಳ್ಳಲಿದೆ. ಇದರಲ್ಲಿ ಹಿರಿಯ ಲೇಖಕ ಕು.ಶಿ.ಹರಿದಾಸ್ ಭಟ್ ಅವರು ಕನ್ನಡದ ರಚಿಸಿದ ಕೆ.ಕೆ. ಹೆಬ್ಬಾರ್ ಕುರಿತ ಕನ್ನಡ ಕೃತಿಯ ಇಂಗ್ಲೀಷ್ ರೂಪ ‘ಲೈಫ್ ಆ್ಯಂಡ್ ಆರ್ಟ್ ಆಫ್ ಕೆ.ಕೆ. ಹೆಬ್ಬಾರ್’ ಬಿಡುಗಡೆಗೊಳ್ಳಲಿದೆ. ಸಂಧ್ಯಾ ವಾಸೇದ್ ಹಾಗೂ ರುಕ್ಮಾ ವಾಸುದೇವ್ ಅವರು ಅನುವಾದಿಸಿರುವ ಈ ಕೃತಿಯ ಸಂಪಾದಕರು ರೇಖಾ ರಾವ್ ಹಾಗೂ ರಜನೀ ಪ್ರಸನ್ನ.

ಕಾರ್ಯಕ್ರಮದಲ್ಲಿ ಕಲಾ ಇತಿಹಾಸಜ್ಞೆ ಮತ್ತು ಆರ್ಟ್ ಕ್ಯುರೇಟರ್ ಆಗಿರುವ ಲೀನಾ ವಿನ್ಸೆೆಂಟ್ ಅವರು ಕೆ.ಕೆ.ಹೆಬ್ಬಾರರಿಗೆ ನುಡಿನಮನ ಸಲ್ಲಿಸಲಿದ್ದಾರೆ. ಮಾಹೆ ಕುಲಪತಿ ಲೆ.ಜ.(ಡಾ.) ಎಂ. ಡಿ. ವೆಂಕಟೇಶ್ ಕೃತಿಯನ್ನು ಬಿಡುಗಡೆ ಗೊಳಿಸಲಿದ್ದಾರೆ. ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ.ಎಚ್.ವಿನೋದ್ ಭಟ್ ವಿಶೇಷ ಭಾಷಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೆ. ಕೆ. ಹೆಬ್ಬಾರರನ್ನು ಕುರಿತ ಎರಡು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ಮಾಹೆ ಯುನಿವರ್ಸಲ್ ಪ್ರೆಸ್‌ನ ಪ್ರಕಟಣೆ ತಿಳಿಸಿದೆ.

ಕೆ.ಕೆ.ಹೆಬ್ಬಾರ್ ಮೂಲತ: ಉಡುಪಿ ಸಮೀಪದ ಮೂಡುಬೆಳ್ಳೆೆ ಬಳಿಯ ಕಟ್ಟಿಂಗೇರಿ ಎಂಬ ಹಳ್ಳಿಯಲ್ಲಿ ಹುಟ್ಟಿದವರು. ಕಲಾವಿದರಾಗಿ ಮುಂಬಯಿಯಲ್ಲಿ ನೆಲೆನಿಂತು ವಿಶ್ವವಿಖ್ಯಾತರಾದರೂ ಕಲಾಕೃತಿಗಳಲ್ಲಿ ಕರ್ನಾಟಕ ಕರಾವಳಿಯ ಪರಂಪರೆ ಮತ್ತು ಸಂಸ್ಕೃತಿಯನ್ನೇ ಬಿಂಬಿಸುತ್ತಿದ್ದರು. ಮಾಹೆ ಕೆ.ಕೆ.ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್‌ನ್ನು ಸ್ಥಾಪಿಸುವ ಮೂಲಕ ಅವರನ್ನು ಗೌರವಿಸಿದೆ. ಈಗ ಮಣಿಪಾಲ ಯೂನಿವರ್ಸಲ್ ಪ್ರೆಸ್ ಮೂಲಕ ಅವರ ಕೃತಿಯನ್ನು ಪ್ರಕಟಿಸುತ್ತಿದೆ.

ಆಸಕ್ತರು ಪೂರ್ವಭಾವಿಯಾಗಿ ಹೆರನ್ನು ದಾಖಲಿಸಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಯುನಿವರ್ಸಲ್ ಪ್ರೆಸ್‌ನ ರೇವತಿ ನಾಡಗೀರ (ಮೊ: 8762563517) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News