ಬೆಳ್ಳೆ: ಕೆ.ಕೆ.ಹೆಬ್ಬಾರ್ ಥೀಂ ಪಾರ್ಕ್ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

Update: 2021-06-12 15:36 GMT

ಶಿರ್ವ, ಜೂ.12: ಪದ್ಮಶ್ರೀ, ಪದ್ಮಭೂಷಣ ಪುರಸ್ಕೃತ ಅಂತಾರಾಷ್ಟ್ರೀಯ ಖ್ಯಾತಿಯ ರೇಖಾಚಿತ್ರ ಕಲಾವಿದ ಕೆ.ಕೆ.ಹೆಬ್ಬಾರ್(ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್) ಹುಟ್ಟಿ ಬೆಳೆದ ಬೆಳ್ಳೆ ಗ್ರಾಪಂ ವ್ಯಾಪ್ತಿಯ ಕಟ್ಟಿಂಗೇರಿಯಲ್ಲಿ ಅವರ 110ನೇ ಜಯಂತಿ ಪ್ರಯುಕ್ತ ಬೆಳ್ಳೆ ಗ್ರಾಪಂ ವತಿಯಿಂದ ಕೆ.ಕೆ. ಹೆಬ್ಬಾರ್ ಥೀಂಪಾರ್ಕ್ ನಿರ್ಮಿಸಲು ಯೋಜಿಸಿದೆ.

ಇದಕ್ಕೆ ಮೀಸಲಿರಿಸಲು ಉದ್ದೇಶಿಸಿರುವ ಸ್ಥಳಕ್ಕೆ ಜೂ.11ರಂದು ಬೆಳ್ಳೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ, ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಗ್ರಾಮ ಕರಣಿಕ ಪ್ರದೀಪ್ ಕುಮಾರ್, ಸಹಾಯಕ ಸ್ಟ್ಯಾನಿ ಡಿಸೋಜಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಥೀಂಪಾರ್ಕ್‌ನಲ್ಲಿ ಕೆಕೆ ಹೆಬ್ಬಾರ್ ಜೇಡಿ ಮಣ್ಣಿನ ಗಟ್ಟಿಗಳಿಂದ ಚಿತ್ರಗಳನ್ನು ಬಿಡಿಸುತ್ತಿದ್ದ ಕಟ್ಟಿಂಗೇರಿ ಕೆರೆ ದಂಡೆಯ ಬಂಡೆಯ ಮೇಲೆ ಅವರ ಪ್ರತಿಮೆ ಸ್ಥಾಪನೆ, ಕೆಕೆ ಹೆಬ್ಬಾರ್ ಆರ್ಟ್ ಗ್ಯಾಲರಿ, ಗ್ರಂಥಾಲಯ, ಚಿತ್ರಕಲಾ ತರಬೇತಿ ಕೇಂದ್ರ, ಕಾಷ್ಠಶಿಲ್ಪತರಬೇತಿ ಕೇಂದ್ರ, ಕಸೂತಿ ಮತ್ತು ಹೊಲಿಗೆ ತರಬೇತಿ ಕೇಂದ್ರ(ಗ್ರಾಮೀಣ ಕೌಶಲಾಭಿವೃದ್ಧಿ ಕೇಂದ್ರ), ದೃಕ್‌ಶ್ರಾವ್ಯ ಸಭಾಂಗಣ ಮತ್ತು ಕಾರ್ಯಾಲಯ ಇರುತ್ತದೆ.

‘ಗ್ರಾಪಂ ವ್ಯಾಪ್ತಿಯ ಕಟ್ಟಿಂಗೇರಿಯಲ್ಲಿ ವಿಶ್ವವಿಖ್ಯಾತ ರೇಖಾಚಿತ್ರ ಕಲಾವಿದ ಕೆಕೆ ಹೆಬ್ಬಾರ್ ಥೀಂ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಜಾಗವನ್ನು ಮಂಜೂರು ಮಾಡಲು ಈಗಾಗಲೇ ತಹಶೀಲ್ದಾರ್‌ರವರಿಗೆ ಪ್ರಸ್ಥಾವನೆ ಸಲ್ಲಿಸ ಲಾಗಿದ್ದು, ಪ್ರಕ್ರಿಯೆ ಜಾರಿಯಲ್ಲಿದೆ. ಅನುದಾನಕ್ಕಾಗಿ ಕನ್ನಡ ಸಂಸ್ಕೃತಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಅನುಮತಿ ನೀಡಿದ್ದಾರೆ. ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು, ಹಾಗೂ ಸಂಸದರಿಗೂ ಪತ್ರ ಬರೆಯಲಾಗಿದ್ದು, ಧನಾತ್ಮಕವಾಗಿ ಸ್ಪಂದನ ನೀಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ ತಿಳಿಸಿದ್ದಾರೆ.

ಕೇಂದ್ರ ಸಚಿವಾಲಯಕ್ಕೆ ಪ್ರಸ್ತಾವನೆ

ಈ ಹಿಂದೆ ಕೇಂದ್ರ ಸರಕಾರದಿಂದ ಬಂದ ಸೂಚನೆಯಂತೆ ಕೆ.ಕೆ.ಹೆಬ್ಬಾರ್ ಅವರ 110ನೇ ಜಯಂತಿಯ ಅಂಗವಾಗಿ ಥೀಂ ಪಾರ್ಕ್ ರಚಿಸುವ ಬಗ್ಗೆ ಗ್ರಾಪಂ ಅಧ್ಯಕ್ಷ ಸುಧಾಕರ ಪೂಜಾರಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಮೂಲಕ ಕೇಂದ್ರ ಸಂಸ್ಕೃತಿ ಸಚಿವರಿಗೆ ಮತ್ತು ಸಚಿವಾಲಯಕ್ಕೆ ಮೆೀ 15ರಂದು ಪ್ರಾಸ್ತವ ಸಲ್ಲಿಸಿದ್ದಾರೆ.

ಈ ಹಿಂದೆಯೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಮನವಿ ಹಿನ್ನೆಲೆಯಲ್ಲಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಂದಿ ರುವ ಪತ್ರಕ್ಕೆ ಸಂಬಂಧಿಸಿದಂತೆ ವಿವರವಾದ ಪ್ರಸ್ತಾವನೆಯನ್ನು ಸಿದ್ಧಗೊಳಿಸಲಾಗುತ್ತಿದೆ. ಸ್ಥಳ ಮೀಸಲು ಮಾಡುವ ಬಗ್ಗೆ ಕಂದಾಯ ಇಲಾಖೆಯಿಂದ ಪ್ರಕ್ರಿಯೆ ನಡೆಯುತ್ತಿದೆ ಎಂದು ಅಧ್ಯಕ್ಷ ಸುಧಾಕರ ಪೂಜಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News