"ಕೇರಳ, ಜಮ್ಮು ಕಾಶ್ಮೀರದಲ್ಲಿ 'ಮನೆಬಾಗಿಲಲ್ಲೇ ಲಸಿಕೆ' ಯೋಜನೆ ಯಶಸ್ವಿಯಾಗಿರುವುದನ್ನು ಗಮನಿಸಿ"

Update: 2021-06-12 16:06 GMT

ಮುಂಬೈ, ಜೂ.12: ಕೇರಳ ಮತ್ತು ಜಮ್ಮು ಕಾಶ್ಮೀರದಲ್ಲಿ ಮನೆಬಾಗಿಲಲ್ಲೇ ಲಸಿಕೆ ಅಭಿಯಾನ ಯಶಸ್ವಿಯಾಗಿರುವುದನ್ನು ಗಮನಿಸುವಂತೆ ಮತ್ತು ಮನೆಬಾಗಿಲಲ್ಲಿ ಲಸಿಕೀಕರಣ ಯೋಜನೆ ಸಾಧ್ಯವಿಲ್ಲ ಎಂಬ ನೀತಿಯನ್ನು ಕೈಬಿಟ್ಟು ಸರಿಯಾದ ನಿರ್ಧಾರ ಕೈಗೊಳ್ಳುವಂತೆ ಬಾಂಬೆ ಹೈಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿದೆ. 

ಕೇರಳ ಮತ್ತು ಜಮ್ಮುಕಾಶ್ಮೀರದಲ್ಲಿ ಮನೆಬಾಗಿಲಲ್ಲೇ ಲಸಿಕೀಕರಣ ಯೋಜನೆ ಈಗಾಗಲೇ ನಡೆಯುತ್ತಿದೆ. ಹೀಗಿರುವಾಗ ಈ ಯೋಜನೆ ಆರಂಭಿಸಲು ಕೇಂದ್ರ ಸರಕಾರಕ್ಕಿರುವ ಸಮಸ್ಯೆಯಾದರೂ ಏನು ಎಂಬುದೇ ಅರ್ಥವಾಗುತ್ತಿಲ್ಲ ಎಂದು ಹೈಕೋರ್ಟ್ನ ಮುಖ್ಯ ನ್ಯಾಯಾಧೀಶೆ ದೀಪಾಂಕರ್ ದತ್ತಾ ಮತ್ತು ನ್ಯಾಯಾಧೀಶ ಜಿಎಸ್ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ. 75 ವರ್ಷ ಮೀರಿದ ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗಾಲಿಕುರ್ಚಿಯನ್ನು ಆಶ್ರಯಿಸಿಕೊಂಡವರಿಗೆ ಮನೆಯಲ್ಲೇ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಕೋರಿ ನ್ಯಾಯವಾದಿಗಳಾದ ಧೃತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ರಾಜ್ಯ ಸರಕಾರಗಳೊಂದಿಗೆ ಸಮಾಲೋಚಿಸಿ ಉತ್ತಮ ನಿರ್ಧಾರ ಕೈಗೊಳ್ಳುವಂತೆ ಸಲಹೆ ಮಾಡಿತು. 

ಕಳೆದ ವಾರ ಮುಂಬೈಯಲ್ಲಿ ಹಿರಿಯ ರಾಜಕಾರಣಿಯೊಬ್ಬರಿಗೆ ಮನೆಯಲ್ಲೇ ಲಸಿಕೆ ನೀಡಲಾಗಿದೆ ಎಂಬ ವರದಿಯನ್ನು ಉಲ್ಲೇಖಿಸಿದ ಹೈಕೋರ್ಟ್, ಲಸಿಕೆ ನೀಡಿದ್ದು ಯಾರು ಎಂದು ಪ್ರಶ್ನಿಸಿತು. ಇದಕ್ಕೆ ಉತ್ತರಿಸಲು ಸರಕಾರದ ಪರ ಹೆಚ್ಚುವರಿ ನ್ಯಾಯವಾದಿ ಗೀತಾ ಶಾಸ್ತ್ರಿ ಒಂದು ವಾರದ ಸಮಯ ಕೇಳಿದರು. 

ಇದಕ್ಕೂ ಒಂದು ವಾರದ ಅವಕಾಶ ಬೇಕೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಕೇರಳ, ಜಮ್ಮು ಕಾಶ್ಮೀರದಲ್ಲಿ ಮನೆಬಾಗಿಲಲ್ಲೇ ಲಸಿಕೆ ನೀಡಲಾಗುತ್ತಿದೆ. ಈ ಬಗ್ಗೆ ಆ ರಾಜ್ಯಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಿರಿ ಮತ್ತು ಈ ಅಭಿಯಾನವನ್ನು ಆರಂಭಿಸುವಂತೆ ಇತರ ರಾಜ್ಯಗಳಿಗೂ ಸೂಚನೆ ನೀಡಬಹುದು.ಕೊರೋನ ಸೋಂಕಿನ ಸಂದರ್ಭದಲ್ಲಿ ಲಸಿಕೀಕರಣ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಿರುವ ಬೃಹನ್ಮುಂಬಯಿ ಮಹಾನಗರಪಾಲಿಕೆ ಈಗ ಮನೆಬಾಗಿಲಲ್ಲೇ ಲಸಿಕೆ ಹಾಕುವ ಯೋಜನೆಯನ್ನೂ ಯಾಕೆ ಆರಂಭಿಸಬಾರದು ಎಂದು ಹೈಕೋರ್ಟ್ ಪ್ರಶ್ನಿಸಿತು. 

ಇದಕ್ಕೆ ಉತ್ತರಿಸಿದ ನಗರಪಾಲಿಕೆ ಪರ ವಕೀಲರು, ನಗರಪಾಲಿಕೆ ಆಯುಕ್ತರು ಈ ಯೋಜನೆಯನ್ನು ಆರಂಭಿಸಲು ಆಸಕ್ತರಾಗಿದ್ದು ಈ ನಿಟ್ಟಿನಲ್ಲಿ ಮಾರ್ಗಸೂಚಿ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ ಎಂದು ಪತ್ರದ ಪ್ರತಿಯನ್ನು ತೋರಿಸಿದರು. ಈ ಪತ್ರದ ಬಗ್ಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸೂಚನೆ ಪಡೆಯುವಂತೆ ತಿಳಿಸಿದ ಹೈಕೋರ್ಟ್ ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News