ಐಷಾರಾಮಿ ಕಾರು ಮಾರಾಟ ಪ್ರಕರಣ : ಪೊಲೀಸ್ ಮಧ್ಯವರ್ತಿಯ ವಿಚಾರಣೆ
ಮಂಗಳೂರು, ಜೂ.12: ವಂಚನಾ ಪ್ರಕರಣದ ಆರೋಪಿಗಳ ಐಷಾರಾಮಿ ಕಾರನ್ನು ಮಂಗಳೂರು ಸಿಸಿಬಿ ಪೊಲೀಸರು ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಐಡಿ ತನಿಖಾ ತಂಡವು ಪೊಲೀಸ್ ಮಧ್ಯವರ್ತಿ ದಿವ್ಯ ದರ್ಶನ್‌ನನ್ನು ವಿಚಾರಣೆಗೊಳಪಡಿಸಿದೆ.
ಸಿಐಡಿ ಎಸ್ಪಿ ಭೀಮಾ ಶಂಕರ್ ಮತ್ತು ಇನ್‌ಸ್ಪೆಕ್ಟರ್ ಚಂದ್ರಪ್ಪ ತಂಡ ಕಳೆದ ವಾರ ಮಂಗಳೂರಿಗೆ ಆಗಮಿಸಿ ತನಿಖೆ ನಡೆಸಿತ್ತು. ಈ ಹಿಂದಿನ ಸಿಸಿಬಿ ಇನ್‌ಸ್ಪೆಕ್ಟರ್ ಶಿವಪ್ರಕಾಶ್, ನಾರ್ಕೊಟಿಕ್ ಅ್ಯಂಡ್ ಎಕಾನಾಮಿಕ್ ಠಾಣೆಯ ಇನ್‌ಸ್ಪೆಕ್ಟರ್ ರಾಮಕೃಷ್ಣ, ಸಿಸಿಬಿ ಎಸೈ ಕಬ್ಬಳ್ ರಾಜ್ ಅವರನ್ನು ವಿಚಾರಣೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಮಧ್ಯವರ್ತಿಯ ವಿಚಾರಣೆ ಬಯಸಿದ್ದರು.
ಅದರಂತೆ ತನಿಖೆಗೆ ಹಾಜರಾಗುವಂತೆ ಪೊಲೀಸ್ ಮಧ್ಯವರ್ತಿ ದಿವ್ಯದರ್ಶನ್‌ಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಅದರಂತೆ ದಿವ್ಯದರ್ಶನ್ ಬೆಂಗಳೂರಿಗೆ ತೆರಳಿ ಸಿಐಡಿ ತಂಡದ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾನೆ ಎಂದು ತಿಳಿದು ಬಂದಿದೆ.
ಸಿಐಡಿ ತಂಡದ ಮುಂದೆ ದಿವ್ಯದರ್ಶನ್ ಹಾಜರಾಗಿ ಹೇಳಿಕೆ ನೀಡುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಐಷಾರಾಮಿ ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಸಿಸಿಬಿ ಅಧಿಕಾರಿ ಮತ್ತು ಸಿಬ್ಬಂದಿ ಸಹಿತ ನಾಲ್ಕು ಮಂದಿ ಅಮಾನತು ಗೊಂಡ ಸಂದರ್ಭ ದಿವ್ಯದರ್ಶನ್‌ಗೆ ಸಿಐಡಿ ನೋಟಿಸ್ ಜಾರಿಗೊಳಿಸಿತ್ತು. ಅದರಂತೆ ದಿವ್ಯದರ್ಶನ್ ಆಗಲೂ ಬೆಂಗಳೂರಿನಲ್ಲಿ ಸಿಐಡಿ ಮುಂದೆ ಹಾಜರಾಗಿದ್ದನು.
ಇನ್ನೊಂದು ಐಷಾರಾಮಿ ಕಾರು ಮಾರಾಟ ಪ್ರಕರಣದಲ್ಲಿ ವಂಚನೆ ಎಸಗಿದ ಆರೋಪದ ಮೇರೆಗೆ ಕಳೆದ ತಿಂಗಳು ದಿವ್ಯ ದರ್ಶನ್ ನನ್ನು ಪೊಲೀಸರು ಬಂಧಿಸಿದ್ದರು. ಬಳಿಕ ದಿವ್ಯ ದರ್ಶನ್ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.