ಕೊಲೆ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಸುನೀಲ್ ಬಜಿಲಕೇರಿಯ ಬಂಧನ: ಅನುರಾಧಾ ಬಾಳಿಗಾ ಆರೋಪ

Update: 2021-06-12 17:18 GMT
ಸುನೀಲ್ ಬಜಿಲಕೇರಿ

ಮಂಗಳೂರು, ಜೂ.12: ನನ್ನ ಅಣ್ಣ ವಿನಾಯಕ ಬಾಳಿಗಾ ಕೊಲೆ ಕೃತ್ಯದ ವಿರುದ್ಧ ಧ್ವನಿ ಎತ್ತಿದ್ದಕ್ಕೆ ಇತರ ಪ್ರಕರಣಗಳಲ್ಲಿ ಸಿಲುಕಿಸಿ ಸುನೀಲ್ ಬಜಿಲಕೇರಿಯನ್ನು ಬಂಧಿಸಲಾಗಿದೆ ಎಂದು ವಿನಾಯಕ ಬಾಳಿಗಾರ ಸಹೋರಿ ಬಿ.ಅನುರಾಧಾ ಬಾಳಿಗಾ ಆರೋಪಿಸಿದ್ದಾರೆ.

ಈ ಸಂಬಂಧ ಹೇಳಿಕೆ ನೀಡಿರುವ ಅವರು ಸಂಸದರ ಸಂದರ್ಶನದ ಭಾಗವನ್ನು ತಿರುಚಲಾಗಿದೆ ಎಂಬ ದೂರಿನ ಆಧಾರದಲ್ಲಿ ಮತ್ತು ಚಿಕ್ಕಮಗಳೂರಿನ ಯುವತಿಯ ದೂರನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಸುನೀಲ್ ಬಜಿಲಕೇರಿಯನ್ನು ಬಂಧಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೂರುಗಳು ಬಂದಾಗ ಆರೋಪಿಯಿಂದ ಹೇಳಿಕೆಗಳನ್ನು ದಾಖಲಿಸಬೇಕು. ಆದರೆ ಸ್ಥಳೀಯ ರಾಜಕೀಯ ವ್ಯಕ್ತಿಗಳ ಪ್ರಭಾವ ಅನತಿಯಂತೆ ಕೆಲಸ ಮಾಡುವ ಪೊಲೀಸರ ಕಾರ್ಯವೈಖರಿಯನ್ನು ಗಮನಿಸುವಾಗ ನ್ಯಾಯ ಸಿಗುವ ಭರವಸೆ ಇಲ್ಲ ಎಂದು ಅವರು ಹೇಳಿದರು.

ಕೋವಿಡ್-ಲಾಕ್‌ಡೌನ್ ನಿಯಮಾವಳಿಯಿದ್ದರೂ ಕೂಡ ಚಿಕ್ಕಮಗಳೂರಿನ ಯುವತಿ ನಗರದ ಬರ್ಕೆ ಠಾಣೆಗೆ ಹಾಜರಾಗಿ ದೂರು ದಾಖಲಿಸಲು ಹೇಗೆ ಸಾಧ್ಯವಾಯಿತು ? ಅವಳನ್ನು ಕರೆ ತಂದವರು ಯಾರು? ಎಂದು ಪ್ರಶ್ನಿಸಿರುವ ಅನುರಾಧಾ ಬಾಳಿಗಾ, ಮಂಗಳೂರು ವೆಂಕಟರಮಣ ದೇವಳದ ಕೆಲವು ಸದಸ್ಯರ ಸಹಿತ ಹಲವರು ಮೇ 14ರಂದು ಕೋವಿಡ್ ನಿಯಮ ಉಲ್ಲಂಘಿಸಿ ಅಂತರ ಜಿಲ್ಲೆ ಪ್ರಯಾಣ ಮಾಡಿ ಕೋಟೇಶ್ವರದ ದೇವಸ್ಥಾನದಲ್ಲಿ ಮಾಸ್ಕ್ ಧರಿಸದೆ, ಸುರಕ್ಷಿತ ಅಂತರ ಕಾಪಾಡದೆ ಇರುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗೆ ದೂರು ನೀಡಿರುವೆ. ಆದರೆ ಕ್ರಮ ಕೈಗೊಳ್ಳದ ಕಾರಣ ನ್ಯಾಯಲಯಕ್ಕೆ ಮೊರೆ ಹೊಕ್ಕಿದ್ದೇನೆ ಎಂದು ತಿಳಿಸಿದ್ದಾರೆ.

ಸಂಸದರ ಸಂದರ್ಶನದ ಭಾಗಗಳನ್ನು ತಿರುಚಲಾಗಿದೆ ಎಂಬ ಆರೋಪದಡಿ ಸುನೀಲ್ ಬಜಿಲಕೇರಿಯನ್ನು ಬಂಧನದಲ್ಲಿಡುವಷ್ಟು ಗಂಭೀರ ಅಪರಾಧವಾದರೆ ದೇವಳದ, ಮಠದ ಸಮಾಜದ ಹಣ ಲಪಟಾಯಿಸಿ ಸಾರ್ವಜನಿಕರನ್ನು ವಂಚಿಸಿದ, ಪ್ರಶ್ನಿಸಿದವನನ್ನು ಕೊಲೆ ಮಾಡಿಸಿದ, ಹೋರಾಟಕ್ಕಿಳಿದ ಸಹೋದರಿ ಮತ್ತು ಸಹಕರಿಸಿದವರನ್ನು ಬೆದರಿಸಿದ್ದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುವುದು ಅಪರಾಧ ಅಲ್ಲವೇ ? ಎಂದು ಬಿ. ಅನುರಾಧ ಬಾಳಿಗಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News