ತನ್ನನ್ನು ಫೇಮಸ್‌ ಮಾಡಿದ ಯೂಟ್ಯೂಬರ್‌ ನೊಂದಿಗೆ ಕ್ಷಮೆ ಕೇಳಿಯೂ ʼಬಾಬಾ ಕ ಡಾಭಾʼ ಮಾಲಕನಿಗೆ ಜನರ ಬೆಂಬಲವಿಲ್ಲ

Update: 2021-06-13 09:51 GMT

ಹೊಸದಿಲ್ಲಿ: 80 ರ ಹರೆಯದಲ್ಲಿ ತನ್ನ ಪತ್ನಿಯೊಂದಿಗೆ ಡಾಭಾ ನಡೆಸುತ್ತಿದ್ದ ಕಾಂತ ಪ್ರಸಾದ್‌ ಎಂಬವರನ್ನು ಯೂಟ್ಯೂಬ್‌ ಚಾನೆಲ್‌ ಮೂಲಕ ಗೌರವ್‌ ವಸಾನ್‌ ಪರಿಚಯಿಸಿದ್ದು, ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದ್ದು ನಿಮಗೆಲ್ಲರಿಗೂ ನೆನಪಿರಬಹುದು. ಕಾಂತ ಪ್ರಸಾದ್‌ ಗೆ ಲಕ್ಷಾಂತರ ರೂ. ಸಹಾಯ ಹರಿದು ಬಂದಿತ್ತು. ಬಳಿಕ ಗೌರವ್‌ ವಿರುದ್ಧ ಕಾಂತ ಪ್ರಸಾದ್‌ ಕೇಸು ದಾಖಲಿಸಿದ ಬಳಿಕ ಹಲವಾರು ಮಂದಿ ಸಹಾಯ ಮಾಡುವ ಯೋಜನೆಯನ್ನೂ ಕೈಬಿಟ್ಟಿದ್ದರು. ಇದೀಗ ವೃದ್ಧ ಕಾಂತ ಪ್ರಸಾದ್‌ ವೀಡಿಯೋ ಮೂಲಕ ಗೌರವ್‌ ರೊಂದಿಗೆ ಕ್ಷಮೆ ಯಾಚನೆ ನಡೆಸಿ ಜನರಲ್ಲಿ ಸಹಾಯಾಭ್ಯರ್ಥನೆ ಮಾಡಿದ್ದಾರೆ.

ಹೊಸ ವೀಡಿಯೋವೊಂದರಲ್ಲಿ ಕಾಂತ ಪ್ರಸಾದ್‌ "ನಾನು ಜನರೊಂದಿಗೆ ವಿನಯಪೂರ್ವಕವಾಗಿ ಹೇಳುತ್ತಿದ್ದೇನೆ. ಗೌರವ್‌ ವಾಸನ್‌ ಕಳ್ಳನಲ್ಲ. ನಾನು ಆತನನ್ನು ಕಳ್ಳ ಎಂದು ಕರೆದಿಲ್ಲ. ನಾನು ಕ್ಷಮೆಯಾಚಿಸುತಿದ್ದೇನೆ. ಎಲ್ಲ ಜನರೂ ನನ್ನ ತಪ್ಪನ್ನು ಮನ್ನಿಸಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ" ಎಂದು ಹೇಳಿಕೆ ನೀಡಿದ್ದಾರೆ.

ಜನಪ್ರಿಯಗೊಂಡ ಬಳಿಕ ಕಾಂತ ಪ್ರಸಾದ್‌ ಚೈನೀಸ್‌ ರೆಸ್ಟೋರೆಂಟ್‌ ಅನ್ನು ತೆರೆದಿದ್ದು, ಅದರ ತಿಂಗಳ ಖರ್ಚು ಒಂದು ಲಕ್ಷ ರೂ. ತಗಲುತ್ತಿದೆ ಮತ್ತು ಕೇವಲ 35,000ರೂ. ವ್ಯಾಪಾರ ನಡೆಯುತ್ತಿದ್ದ ಕಾರಣ ರೆಸ್ಟೋರೆಂಟ್‌ ಅನ್ನು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. 

ಈ ವಿಚಾರವನ್ನೂ ತಮ್ಮ ವೀಡಿಯೋದಲ್ಲಿ ತಿಳಿಸಿದ್ದರೂ ಜನರಿಂದ ಯಾವುದೇ ಭರಪೂರ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ತನ್ನನ್ನು ಫೇಮಸ್‌ ಮಾಡಿದ್ದ ವ್ಯಕ್ತಿಯ ವಿರುದ್ಧ ಕೇಸು ದಾಖಲಿಸಿದ್ದ ಸಂದರ್ಭದಲ್ಲಿ ಜನರು ಕಾಂತ್ರ ಪ್ರಸಾದ್‌ ರನ್ನು ʼವಿಶ್ವಾಸದ್ರೋಹಿʼ ಎಂದು ಸಾಮಾಜಿಕ ತಾಣದಲ್ಲಿ ಮುದ್ರೆಯೊತ್ತಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News