ಚರಂಡಿ ಸರಿಯಾಗಿ ಸ್ವಚ್ಛ ಮಾಡಿಲ್ಲ ಎಂಬ ಆರೋಪ: ಗುತ್ತಿಗೆದಾರನ ಮೇಲೆ ಕಸ ಸುರಿಯಲು ಹೇಳಿದ ಶಾಸಕ!

Update: 2021-06-13 10:33 GMT
Photo: Video screengrab

ಮುಂಬೈ: ಚರಂಡಿಗಳನ್ನು ಸರಿಯಾಗಿ ಸ್ವಚ್ಛ ಗೊಳಿಸಲಿಲ್ಲ ಎಂಬ ಆರೋಪದ ಮೇಲೆ ಶಿವಸೇನೆ ಶಾಸಕರೊಬ್ಬರು ಗುತ್ತಿಗೆದಾರನನ್ನು ಮುಂಬೈನ ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದಲ್ಲದೆ, ಆತನಿಗೆ ಶಿಕ್ಷೆ ನೀಡುವ ಸಲುವಾಗಿ ಗುತ್ತಿಗೆದಾರನ ಮೇಲೆ ಕಸವನ್ನು ಎಸೆಯುವಂತೆ ತನ್ನ ಬೆಂಬಲಿಗರಿಗೆ ಸೂಚಿಸಿರುವ ಆಘಾತಕಾರಿ ಘಟನೆ ರವಿವಾರ ನಡೆದಿದೆ. ಈ ಘಟನೆಯು ಕ್ಯಾಮರಾದಲ್ಲಿ ಸೆರೆಯಾಗಿದೆ.

ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಉತ್ತರ ಮುಂಬೈನ ಕಾಂದಿವಲಿ ಕ್ಷೇತ್ರದ ಶಾಸಕ ದಿಲೀಪ್ ಲಾಂಡೆ ಹಾಗೂ ಇತರರು, ಗುತ್ತಿಗೆದಾರನನ್ನು ನೀರಿನಿಂದ ತುಂಬಿದ ರಸ್ತೆಯಲ್ಲಿ ಕುಳಿತುಕೊಳ್ಳಲು ಒತ್ತಾಯಿಸುತ್ತಿರುವುದು,  ಗುತ್ತಿಗೆದಾರ ಕುಳಿತು ಕೊಳ್ಳುತ್ತಿದ್ದಂತೆ, ಒಬ್ಬ ವ್ಯಕ್ತಿಯು  ಗುತ್ತಿಗೆದಾರನನ್ನು ತಳ್ಳುತ್ತಾನೆ. ಕಸದ ರಾಶಿಯನ್ನು ಎತ್ತಿ ತಂದು  ಗುತ್ತಿಗೆದಾರನ ಮೇಲೆ ಸುರಿಯುವಂತೆ ಶಾಸಕರು ಇಬ್ಬರು ವ್ಯಕ್ತಿಗಳಿಗೆ ನಿರ್ದೇಶಿಸುತ್ತಾರೆ. ಶಾಸಕರು ಹೇಳಿದಂತೆ ಆ ಇಬ್ಬರು ಬೆಂಬಲಿಗರು ಕಸವನ್ನು ಗುತ್ತಿಗೆದಾರನ ಮೇಲೆ ಸುರಿದಿದ್ದಾರೆ.

ಗುತ್ತಿಗೆದಾರನು ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸಿಲ್ಲ ಎಂದು ಶಾಸಕರು ಆರೋಪಿಸಿದ್ದು,ಕಳೆದ ಕೆಲವು ದಿನಗಳಿಂದ ನಗರದಲ್ಲಿ ಭಾರೀ ಮಾನ್ಸೂನ್ ಮಳೆಯಾಗುತ್ತಿದ್ದಂತೆ, ಚರಂಡಿಯಿಂದ ನೀರು ಹೊರಬಂದು  ರಸ್ತೆಯಲ್ಲಿ ಹರಿಯುತ್ತಿದೆ ಎಂದಿದ್ದಾರೆ.

ಈ ಪ್ರದೇಶದಲ್ಲಿ ಜಲಾವೃತವನ್ನು ತಡೆಗಟ್ಟುವ ಜವಾಬ್ದಾರಿಯನ್ನು ಹೊಂದಿರುವವರು ತಮ್ಮ ಕೆಲಸವನ್ನು ಸರಿಯಾಗಿ ಮಾಡಿಲ್ಲ. ಆದರೆ ಜನರು ನನ್ನ ಮೇಲೆ ನಂಬಿಕೆಯನ್ನು ಇಟ್ಟುಕೊಂಡು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಆದ್ದರಿಂದ ನನ್ನ ಕರ್ತವ್ಯವನ್ನು ಪೂರೈಸಲು ನಾನು ಸ್ಥಳೀಯ ಪಕ್ಷದ ಘಟಕದ ಮುಖ್ಯಸ್ಥ ಹಾಗೂ  ಶಿವಸೇನೆಯ ಕಾರ್ಯಕರ್ತರೊಂದಿಗೆ ಚರಂಡಿಗಳನ್ನು ಸ್ವಚ್ಛಗೊಳಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಲಾಂಡೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News