ದ.ಕ. ಜಿಲ್ಲೆ : ಜೂ.16ರವರೆಗೆ ಆರೆಂಜ್ ಅಲೆರ್ಟ್ : ಹವಾಮಾನ ಇಲಾಖೆ
ಮಂಗಳೂರು, ಜೂ.13: ದ.ಕ.ಜಿಲ್ಲಾದ್ಯಂತ ರವಿವಾರ ದಿನವಿಡೀ ಉತ್ತಮ ಮಳೆಯಾಗಿದೆ. ಶನಿವಾರದಿಂದ ಸುರಿದ ಸತತ ಮಳೆಗೆ ಜಿಲ್ಲೆಯಲ್ಲಿ 6 ಮನೆಗಳು ಸಂಪೂರ್ಣ ಮತ್ತು 8 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಇದರೊಂದಿಗೆ ಎ.1ರಿಂದ ಈವರೆಗೆ ಜಿಲ್ಲೆಯಲ್ಲಿ ಮಳೆಗೆ 30 ಮನೆಗಳು ಪೂರ್ಣ ಮತ್ತು 239 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಅಲ್ಲದೆ ಕುಂಜತ್ತಬೈಲ್ ಪರಿಸರದ ಮನೆಯೊಂದು ಪೂರ್ಣ ಪ್ರಮಾಣದಲ್ಲಿ ಕುಸಿದು ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಆರೆಂಜ್ ಅಲರ್ಟ್
ಜೂ.16ರವರೆಗೆ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ. ಈ ಅವಧಿಯಲ್ಲಿ 115ರಿಂದ 204 ಮಿ.ಮೀ ವರೆಗೆ ಮಳೆ ಸುರಿ ಯುವ ಸಾಧ್ಯತೆಯಿದೆ. ಜೂ.16ರ ಬಳಿಕ ಮಳೆಯ ಅಬ್ಬರ ಸ್ವಲ್ಪ ಕಡಿಮೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮೀನುಗಾರರಿಗೆ ಎಚ್ಚರಿಕೆ
ಕರಾವಳಿಯ ತೀರ ಪ್ರದೇಶದಲ್ಲಿ ಗಂಟೆಗೆ ಸುಮಾರು 45ರಿಂದ 55 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಜೂ.16ರವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಧಾರಾಕಾರ ಮಳೆ
ದ.ಕ. ಜಿಲ್ಲಾದ್ಯಂತ ರವಿವಾರ ಉತ್ತಮ ಮಳೆಯಾಗಿದೆ. ಬೆಳಗ್ಗಿನಿಂದಲೇ ಧಾರಾಕಾರ ಮಳೆ ಸುರಿದಿದೆ. ಘಟ್ಟ ಪ್ರದೇಶಗಳಲ್ಲಿ ಕೂಡ ಸತತ ಮಳೆ ಸುರಿಯುತ್ತಿರುವ ಕಾರಣ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ.
ನಗರದ ಅಲ್ಲಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರು ಚರಂಡಿಗಳಲ್ಲಿ ಸರಾಗವಾಗಿ ಹರಿದು ಹೋಗಲಾಗದೆ ರಸ್ತೆಗಳಲ್ಲೇ ನೀರು ಹರಿದಿದೆ. ನಗರದ ಕೊಡಿಯಾಲ್ಬೈಲ್ ಮತ್ತು ಅಳಕೆಯ ಸುತ್ತಮುತ್ತ ಮತ್ತು ಪಡೀಲ್, ತೊಕೊಟ್ಟು, ಪಂಪ್‌ವೆಲ್ ಮೇಲ್ಸೇತುವೆಯ ತಳದಲ್ಲಿ ಮಳೆ ನೀರು ಶೇಖರಣೆಗೊಂಡು ಸಮಸ್ಯೆ ಸೃಷ್ಟಿಯಾಗಿತ್ತು.ಕೊಟ್ಟಾರ ಚೌಕಿಯ ರಾಜಕಾಲುವೆಯಲ್ಲಿ ನೀರು ತುಂಬಿ ರಸ್ತೆಯಲ್ಲೇ ನೀರು ಹರಿಯುವ ದೃಶ್ಯಗಳು ಕಂಡು ಬಂತು.
ನಗರದ ಹೊರವಲಯದ ಪಡುಪಣಂಬೂರು, ಸುರತ್ಕಲ್, ಮುಲ್ಕಿ ಮತ್ತಿತರ ಕಡೆಯೂ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ, ಸುಳ್ಯ, ಕಡಬ ತಾಲೂಕಿನಲ್ಲಿ ಕೂಡ ಬಿರುಸಿನ ಗಾಳಿ-ಮಳೆಯಾಗಿದೆ. ನದಿಗಳ ನೀರಿನ ಮಟ್ಟದಲ್ಲೂ ಏರಿಕೆಯಾಗಿದ್ದು, ನದಿ ತೀರದ ತಗ್ಗು ಪ್ರದೇಶದಲ್ಲಿರುವ ಕುಟುಂಬದ ಸದಸ್ಯರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಕಡಬದಲ್ಲಿ ಅಧಿಕ ಮಳೆ
ಶನಿವಾರ ಬೆಳಗ್ಗಿನಿಂದ ರವಿವಾರ ಬೆಳಗ್ಗಿನವರೆಗೆ ಕಡಬ ತಾಲೂಕಿನಲ್ಲಿ ಅತ್ಯಧಿಕ 71.2 ಮಿ.ಮೀ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ 56.4, ಬಂಟ್ವಾಳ 54.6, ಮಂಗಳೂರು 48.8, ಪುತ್ತೂರು 52.4, ಸುಳ್ಯ 54.1, ಮೂಡುಬಿದಿರೆ 45.1 ಮಿ.ಮೀ. ಸಹಿತ ದ.ಕ ಜಿಲ್ಲೆಯಲ್ಲಿ ಸರಾಸರಿ 54.6 ಮಿ.ಮೀ. ಮಳೆಯಾಗಿದೆ.
ಮನೆಗಳಿಗೆ ಹಾನಿ
ಮಳೆಯಿಂದಾಗಿ ಮಂಗಳೂರು ತಾಲೂಕಿನಲ್ಲಿ 1 ಮನೆ ಸಂಪೂರ್ಣ ಮತ್ತು 2 ಮನೆಗಳು ಭಾಗಶಃ ಹಾನಿಗೀಡಾಗಿದೆ. ಬಂಟ್ವಾಳದಲ್ಲಿ 3 ಮನೆ ಸಂಪೂರ್ಣ ಮತ್ತು 1 ಮನೆಗೆ ಭಾಗಶಃ ಹಾನಿಯಾಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಕೂಡ 2, ಕಡಬ ತಾಲೂಕಿನಲ್ಲಿ 1 ಮನೆಗೆ ಭಾಗಶಃ ಹಾನಿಯಾಗಿದೆ. ಮುಲ್ಕಿ ತಾಲೂಕಿನಲ್ಲಿ 2 ಮನೆ ಸಂಪೂರ್ಣ ಮತ್ತು 2 ಮನೆ ಭಾಗಶಃ ಹಾನಿಗೀಡಾಗಿದೆ. ಬಡಗ ಎಡಪದವು, ಮೂಡುಪೆರಾರ, ಇರುವೈಲು ಗ್ರಾಮದ ಕೋರಿಬೆಟ್ಟು, ಬಪ್ಪನಾಡು, ಕುರ್ನಾಡು ಗ್ರಾಮದಲ್ಲಿ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾ ಪ್ರಾಕೃತಿಕ ವಿಕೋಪ ನಿರ್ವಹಣಾ ಪ್ರಾಧಿಕಾರದ ಪ್ರಕಟನೆಯು ತಿಳಿಸಿದೆ.