×
Ad

ಉಡುಪಿ ಜಿಲ್ಲೆಯಾದ್ಯಂತ ಮುಂದುವರಿದ ಬಿರುಸಿನ ಮಳೆ : ಹಲವು ಮನೆಗಳು, ವಿದ್ಯುತ್ ಕಂಬಗಳಿಗೆ ಹಾನಿ

Update: 2021-06-13 19:27 IST

ಉಡುಪಿ, ಜೂ.13: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ರವಿವಾರ ಕೂಡ ಬಿರುಸಿನ ಮಳೆ ಮುಂದುವರೆದಿದೆ. ಗಾಳಿ ಮಳೆಯಿಂದ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 30.2ಮಿ.ಮೀ., ಬ್ರಹ್ಮಾವರ - 51.1ಮಿ.ಮೀ., ಕಾಪು -36.9ಮಿ.ಮೀ., ಕುಂದಾಪುರ-36.2 ಮಿ.ಮೀ., ಬೈಂದೂರು - 56.1ಮಿ.ಮೀ., ಕಾರ್ಕಳ- 58.3ಮಿ.ಮೀ., ಹೆಬ್ರಿ -46.7ಮಿ.ಮೀ ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಸರಾಸರಿ 83.3 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಮಳೆಯಿಂದಾಗಿ ಜಿಲ್ಲಾಯಾದ್ಯಂತೆ ಜನರ ಸಂಚಾರ ಅಸ್ತವ್ಯಸ್ಥಗೊಂಡಿದೆ. ಗ್ರಾಮೀಣ ಭಾಗದ ಕೆಲವು ಪ್ರದೇಶಗಳಲ್ಲಿ ಕೃತಕ ನೆರೆ ಉಂಟಾಗಿದೆ. ರಸ್ತೆಗಳಲ್ಲಿ ನಿಂತ ನೀರಿನಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಮಧ್ಯೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿದ್ದು, ನಾಟಿ ಸೇರಿದಂತೆ ಇತರೆ ಕೆಲಸಗಳು ಭರದಿಂದ ಸಾಗುತ್ತಿದೆ. ಜಿಲ್ಲೆಯ ಪ್ರಮುಖ ನದಿಗಳೆಲ್ಲವೂ ತುಂಬಿ ಹರಿಯುತ್ತಿದೆ.

ಕಾರ್ಕಳದಲ್ಲಿ ಅಪಾರ ನಷ್ಟ

ಜು.12ರಂದು ರಾತ್ರಿ ಸುರಿದ ಗಾಳಿಮಳೆಯಿಂದಾಗಿ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಬೋರ್ಗಲ್ಗುಡ್ಡೆ ಬಾಳೆಹಿತ್ತಲು ಎಂಬಲ್ಲಿನ ಗಣಪತಿ ನಾಯಕ್ ಎಂಬವರ ಮನೆ ಹಾನಿಯಾಗಿ 30,000ರೂ. ಮತ್ತು ಶ್ರೀನಿವಾಸ ಆಚಾರಿ ಎಂಬವರ ಮನೆ ಹಾನಿಯಾಗಿ 20,000ರೂ. ನಷ್ಟ ಉಂಟಾಗಿದೆ.

ಕಾರ್ಕಳ ಕಾಳಿಕಾಂಬಾ ದೇವಸ್ಥಾನ ಬಳಿ ಭೀಕರ ಗಾಳಿಗೆ ರವೀಂದ್ರ ರಾವ್ ಎಂಬವರ ಮನೆಗೆ ಮರ ಬಿದ್ದು 50,000ರೂ. ನಷ್ಟವಾಗಿದೆ. ಗಾಳಿಮಳೆಯಿಂದ ಮನೆಗಳಿಗೆ ಹಾನಿಯಾಗಿ ನಿಟ್ಟೆ ಗ್ರಾಮದ ಕೊಟ್ರಬೆಟ್ಟುವಿನ ಶೇಖರ ಶೆಟ್ಟಿ ಎಂಬವರಿಗೆ 15000, ಮಿಯಾರು ಗ್ರಾಮದ ಮುಲಡ್ಕಯ ಮೊಂಟ ಎಂಬ ವರಿಗೆ 10,000ರೂ., ಬೋರಕಟ್ಟೆ ನಿವಾಸಿ ಸಂಜೀವ ಶೆಟ್ಟಿಗೆ 10000, ನಿಟ್ಟೆ ಗ್ರಾಮದ ಮದನಾಡುವಿನ ಅನಿತಾ ಪೂಜಾರಿಗೆ 10000ರೂ., ಕಾಂತಾವರ ಗ್ರಾಮದ ಯಶೋಧ ಪೂಜಾರ್ತಿಗೆ 10,000ರೂ., ಮಾಳ ಗ್ರಾಮದ ಗುಲಾಬಿ ಹೆಗ್ಡೆಗೆ 20,000ರೂ. ನಷ್ಟ ಉಂಟಾಗಿದೆ.

ಕಾರ್ಕಳ ಬಂಗ್ಲೆಗುಡ್ಡೆ ಮಸೀದಿ ಕಟ್ಟಡದ ಮೇಲೆ ತೆಂಗಿನ ಮರ ಹಾಗೂ ರಸ್ತೆ ಬದಿ ವಿದ್ಯುತ್ ಕಂಬಗಳು ಬಿದ್ದಿದ್ದು, ಇದರಿಂದ ಯಾವುದೇ ನಷ್ಟ ಉಂಟಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಪುವಿನಲ್ಲಿ ಮನೆಗಳಿಗೆ ಹಾನಿ

ಕಾಪು ತಾಲೂಕಿನಲ್ಲಿ ಗಾಳಿಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ನಂದಿಕೂರು ಗ್ರಾಮದ ಭಾಸ್ಕರ ಸಾಲಿಯಾನ್‌ಗೆ 25,000ರೂ., ಕಾಪು ಪಡು ಗ್ರಾಮದ ಉಸ್ಮಾನ್ ಎಂಬವರಿಗೆ 15,000ರೂ. ಮತ್ತು ಅಂಬಾ ಪೂಜಾರ್ತಿಗೆ 12,000ರೂ., ಮಲ್ಲಾರು ಗ್ರಾಮದ ಎಲಿಜಬೆತ್ ಎಂಬವರಿಗೆ 20,000ರೂ., ತೆಂಕ ಗ್ರಾಮದ ಕೃಷ್ಣ ರಾವ್ಗೆ 60,000ರೂ., ನಡ್ಸಾಲು ಗ್ರಾಮದ ಗುರುಪ್ರಸಾದ್ ರಾವ್ಗೆ 60,000ರೂ. ನಷ್ಟ ಸಂಭವಿಸಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಮೆಸ್ಕಾಂಗೆ 36ಲಕ್ಷ ರೂ. ನಷ್ಟ

ನಿರಂತವಾಗಿ ಸುರಿಯುತ್ತಿರುವ ಗಾಳಿ ಮಳೆಯಿಂದಾಗಿ ಜಿಲ್ಲೆಯಲ್ಲಿ 107 ವಿದ್ಯುತ್ ಕಂಬಗಳು, 23 ಟ್ರಾನ್ಸ್‌ಫಾರ್ಮರ್, ವಿದ್ಯುತ್ ತಂತಿಗಳು ಉರುಳಿ ಬಿದ್ದಿದ್ದು, ಇದರಿಂದ ಮೆಸ್ಕಾಂಗೆ 36ಲಕ್ಷ ರೂ. ನಷ್ಟ ಉಂಟಾಗಿದೆ.

ಏಕಕಾಲದಲ್ಲಿ ವಿವಿಧೆಡೆಯಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯದಲ್ಲಿ ವಿಳಂಬವಾಗಿದ್ದು, ಇದರಿಂದ ಜಿಲ್ಲೆಯ ಹಲವು ಕಡೆಗಳಲ್ಲಿ ಶನಿವಾರ ಸಂಜೆಯಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ.

ಶನಿವಾರ ಉಡುಪಿ ನಗರದ ಅಲಂಕಾರ ಚಿತ್ರಮಂದಿರ ಹಿಂಭಾಗದ ರಸ್ತೆಯಲ್ಲಿ ವಿದ್ಯುತ್ ತಂತಿ ಹಾಗೂ ಕಂಬಗಳು ಉರುಳಿ ಬಿದ್ದ ಪರಿಣಾಮ ರವಿವಾರ ಸಂಜೆಯವರೆಗೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದರಿಂದ ಈ ರಸ್ತೆ ಸಂಚಾರ ಬಂದ್ ಆಗಿದೆ. ಅಲ್ಲದೆ ಕಳೆದ 24ಗಂಟೆಗಳಿಂದ ಈ ಪರಿಸರದಲ್ಲಿ ವಿದ್ಯುತ್ ಇಲ್ಲವಾಗಿದೆ.

ಧರೆಗೆ ಉರುಳಿದ ಪುರಾತನ ಅಶ್ವತ್ಥಮರ

ಭಾರೀ ಗಾಳಿಮಳೆಯಿಂದಾಗಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಳದ ಎದುರಿನ ಪುರಾತನ ಅಶ್ವತ್ಥಮರ ಇಂು ಬೆಳಗ್ಗೆ ರಸ್ತೆಗೆ ಉರುಳಿ ಬಿದ್ದಿದೆ.

ಇದರಿಂದ ಸಮೀಪದ ಕಟ್ಟಡಗಳಿಗೆ ಅಲ್ಪಸ್ವಲ್ಪಹಾನಿ ಉಂಟಾಗಿದೆ ಉಳಿದಂತೆ ಯಾವುದೇ ಹಾನಿಯಾಗಿಲ್ಲ. ರಸ್ತೆಗೆ ಬಿದ್ದ ಕಾರಣ ಕೆಲವು ಸಮಯ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮೆಸ್ಕಾಂ ಅಧಿಕಾರಿಗಳು ಹಾಗೂ ಕೋಟೇಶ್ವರ ಗ್ರಾಪಂನವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News