ತುಳು ಅಧಿಕೃತ ರಾಜ್ಯಭಾಷೆಗೆ ಆಗ್ರಹಿಸಿ ಟ್ವಿಟರ್ ಅಭಿಯಾನ

Update: 2021-06-13 17:48 GMT

ಮಂಗಳೂರು, ಜೂ.13: ನಾಡಿನ ವಿವಿಧ ತುಳು ಸಂಘಟನೆಗಳು ನೀಡಿದ ಕರೆಯಂತೆ ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತುಳು ಭಾಷೆ ಯನ್ನು ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ರವಿವಾರ ಟ್ವಿಟರ್ ಅಭಿಯಾನ ನಡೆಯಿತು.

‘ತುಳು ಅಫೀಶಿಯಲ್ ಇನ್ ಕೆಎ, ಕೆಎಲ್’ ಎಂಬ ಹ್ಯಾಷ್‌ಟ್ಯಾಗ್‌ನಡಿ ಸುಮಾರು 1.80 ಲಕ್ಷಕ್ಕೂ ಅಧಿಕ ಟ್ವೀಟ್ ಮಾಡುವ ಮೂಲಕ ತುಳು ಅಧಿಕೃತ ರಾಜ್ಯಭಾಷೆಗೆ ಬಲವಾದ ಒತ್ತಡ ಹಾಕಿ ಗಮನ ಸೆಳೆದಿದ್ದಾರೆ.

ಜೈ ತುಳುನಾಡು, ಯುವ ತುಳುನಾಡು ಸಂಘಟನೆಗಳ ನೇತೃತ್ವದಲ್ಲಿ ಹಲವು ಸಂಘ ಸಂಸ್ಥೆಗಳು ಈ ಅಭಿಯಾನದಲ್ಲಿ ಕೈಜೋಡಿಸಿದ್ದವು. ತುಳು ರಾಜ್ಯಭಾಷೆಯಾಗಿ ಅಧಿಕೃತವಾಗಿ ಘೋಷಣೆಯಾದರೆ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಸುಲಭವಾಗಲಿದೆ ಎಂಬ ಉದ್ದೇಶದಿಂದ ಈ ಟ್ವಿಟ್ಟರ್ ಅಭಿಯಾನ ಆಯೋಜಿಸಲಾಗಿತ್ತು.

ರವಿವಾರ ಬೆಳಗ್ಗಿನಿಂದಲೇ ಟ್ವೀಟ್‌ಗಳ ಸರಮಾಲೆ ಆರಂಭವಾಗಿದ್ದವು. ಮಧ್ಯಾಹ್ನದ ವೇಳೆಗೆ ವರ್ಲ್ಡ್ ಟ್ರೆಂಡಿಂಗ್‌ನಲ್ಲಿ 6ನೇ ಸ್ಥಾನಕ್ಕೇರುವ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಸಂಜೆಯ ವೇಳೆಗೆ 1.77 ಲಕ್ಷ ಮಂದಿ ಟ್ವೀಟ್ ಮಾಡಿದ್ದರು. ದೇಶ ವಿದೇಶಗಳ ತುಳುವರು ಟ್ವೀಟ್ ಮಾಡುವ ಮೂಲಕ ಮುಖ್ಯಮಂತ್ರಿ, ಕರಾವಳಿಯ ಶಾಸಕರು, ಸಂಸದರಿಗೂ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ.

ಈ ಅಭಿಯಾನಕ್ಕೆ ತುಳು ಚಿತ್ರರಂಗದ ಬಹುತೇಕ ನಟ, ನಟಿಯರು ಕೈಜೋಡಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು ಮತ್ತು ಕರಾವಳಿಯ ಶಾಸಕರು, ಮಾಜಿ ಶಾಸಕರು ಕೂಡ ಟ್ವೀಟ್ ಮಾಡಿದ್ದರು.

‘ತುಳು ರಾಜ್ಯದ ಆಡಳಿತಾತ್ಮಕ ಭಾಷೆ ಆಗಬೇಕು. ತುಳುವಿಗೆ ವಿಶೇಷ ಮಾನ್ಯತೆ ಸಿಗಬೇಕು ಎನ್ನುವ ತುಳುನಾಡಿನ ಬಂಧುಗಳ ಹೋರಾಟಕ್ಕೆ ನನ್ನದೂ ಧ್ವನಿ ಇದೆ’ ಎಂದು ಸಚಿವ ಕೋಟ ಟ್ವೀಟ್‌ನಲ್ಲಿ ಹೇಳಿದ್ದರೆ, ‘ನೀವು ತುಳುನಾಡಿನ ಉಸ್ತುವಾರಿ ಸಚಿವರು. ನೀವು ಮುಂದಾಳತ್ವ ವಹಿಸಬೇಕು. ಯಾವುದೇ ಬೇಡಿಕೆ, ವರದಿ, ಮನವಿಗಳು ಬೇಕಿಲ್ಲ. ಮುಂದಿನ ಅಧಿವೇಶನದಲ್ಲಿ ರಾಜ್ಯಭಾಷೆ ಎಂದು ಘೋಷಣೆಯಾಗಲಿ’ ಎಂದು ಮಹಿ ಮುಲ್ಕಿ ಎಂಬವರು ಒತ್ತಾಯಿಸಿ ಗಮನ ಸೆಳೆದಿದ್ದಾರೆ. ‘ತುಳುವಿಗೆ ಮಾನ್ಯತೆ ತೆಗೆದುಕೊಡುತ್ತೇನೆ ಎಂದೇಕೆ ಹೇಳುವುದಿಲ್ಲ’ ಎಂದು ಶಾಸಕರ ಟ್ವೀಟ್‌ಗಳಿಗೂ ಅನೇಕರು ಪ್ರಶ್ನಿಸಿದ್ದಾರೆ.

ಇದು ನಾಲ್ಕನೇ ಅಭಿಯಾನ

ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆ ಮುಂದಿಟ್ಟು ನಾಲ್ಕನೆ ಬಾರಿ ಟ್ವೀಟ್ ಅಭಿಯಾನ ನಡೆದಿದೆ. ಕಳೆದ ಬಾರಿ ಅಭಿಯಾನ ನಡೆದಾಗ ಭಾರತದ ಟ್ರೆಂಡಿಂಗ್‌ನಲ್ಲಿ ನಂ.1 ಸ್ಥಾನದಲ್ಲಿತ್ತು. ವರ್ಷಕ್ಕೆ ಒಂದೆರಡು ಬಾರಿಯಂತೆ ಟ್ವೀಟ್ ಅಭಿಯಾನ ನಡೆಯುತ್ತಲೇ ಇದೆ. ಈ ಬಾರಿಯ ಅಭಿಯಾನದಲ್ಲಿ ಆಡಳಿತರೂಢ ಶಾಸಕರು ಕೂಡ ಟ್ವೀಟ್ ಮಾಡಿರುವುದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News