×
Ad

ಎನ್‌ಎಂಪಿಟಿಗೆ ಭಾರೀ ಗಾತ್ರದ ಕಂಟೇನರ್ ನೌಕೆ ಆಗಮನ

Update: 2021-06-15 18:56 IST

ಮಂಗಳೂರು, ಜೂ.15: ನವಮಂಗಳೂರು ಬಂದರಿಗೆ ಇದೇ ಮೊದಲ ಬಾರಿಗೆ ಭಾರೀ ಗಾತ್ರದ ಕಂಟೇನರ್ ನೌಕೆ ಮಂಗಳವಾರ ಆಗಮಿಸಿದೆ.

ಎಂ.ವಿ. ಎಸ್‌ಎಸ್‌ಎಲ್ ಬ್ರಹ್ಮಪುತ್ರ- ವಿ.084 ಕಂಟೇನರ್ ನೌಕೆ ಇದಾಗಿದ್ದು, ಕಂಟೇನರ್‌ಗಳ ಸಂಖ್ಯೆ ಹಾಗೂ ನೌಕೆ ಗಾತ್ರದಲ್ಲೂ ಬೃಹತ್ತಾಗಿದೆ. ಈ ನೌಕೆ 260 ಮೀಟರ್ ಉದ್ದ ಹಾಗೂ 32.35 ಮೀಟರ್ ಅಗಲವಿದೆ. 25864.40 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿಯನ್ನು ಈ ನೌಕೆ ಹೊತ್ತು ತಂದಿದೆ.

ಎನ್‌ಎಂಪಿಟಿಯಲ್ಲಿ ಕಂಟೇನರ್ ನಿರ್ವಹಣೆ ಏರಿಕೆಯಾಗುತ್ತಿದ್ದು, 2000ನೇ ಇಸವಿಯಲ್ಲಿ 2 ಸಾವಿರ ಟಿಇಯುಗಳಷ್ಟು ನಿರ್ವಹಣೆ ಮಾಡಿದ್ದರೆ, 2020-21ರಲ್ಲಿ ಈ ಪ್ರಮಾಣ 1.5 ಲಕ್ಷ ಟಿಇಯುಗೆ ಹೆಚ್ಚಿದೆ.

ಈವರೆಗೆ ಎನ್‌ಎಂಪಿಟಿಯಲ್ಲಿ ಕಂಟೇನರ್ ನಿರ್ವಹಣೆಯನ್ನು ವಿವಿಧ ಸಾಮಾನ್ಯ ಸರಕು ಬರ್ತ್‌ಗಳಲ್ಲಿ ನಿರ್ವಹಿಸಲಾಗುತ್ತಿತ್ತು. ಕಂಟೇನರ್ ಪ್ರಮಾಣ ಹೆಚ್ಚಳವಾಗುತ್ತಿದ್ದಂತೆ ಅದರ ನಿರ್ವಹಣೆಯ ಯಾಂತ್ರೀಕರಣದ ಕೆಲಸವನ್ನು ಪಿಪಿಇ ಮಾದರಿಯಡಿ ಮಾಡುತ್ತಿದೆ. ಅದಕ್ಕಾಗಿ ಆಳವಾಗಿ ನಿರ್ಮಾಣ ಮಾಡಲ್ಪಟ್ಟ 14ನೇ ಬರ್ತ್‌ನಲ್ಲಿ ಮಂಗಳೂರು ಕಂಟೇನರ್ ಟರ್ಮಿನಲ್ ಪ್ರೈ.ಲಿ. ಸಹಯೋಗದಲ್ಲಿ ನಿರ್ವಹಿಸಲಾಗುತ್ತಿದೆ.

ಈ ಸಂದರ್ಭ ಹಾಜರಿದ್ದ ಎನ್‌ಎಂಪಿಟಿ ಅಧ್ಯಕ್ಷ ಡಾ. ಎ.ವಿ. ರಮಣ ದೊಡ್ಡ ಕಂಟೇನರ್ ಹಡಗಿನ ದಾಖಲೆ ನಿರ್ವಹಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News