×
Ad

ಮಾಜಿ ಸೈನಿಕ ಕರ್ನಲ್ ರಾಮಚಂದ್ರ ರಾವ್ ನಿಧನ

Update: 2021-06-15 20:23 IST

ಉಡುಪಿ, ಜೂ.15: ನಿವೃತ್ತ ಸೇನಾಧಿಕಾರಿ, ಸಮಾಜ ಸೇವಕ ಕರ್ನಲ್ ರಾಮಚಂದ್ರ ರಾವ್ ಸೋಮವಾರ ರಾತ್ರಿ ನಿಧನ ಹೊಂದಿದರು. ಅವರಿಗೆ 88 ವರ್ಷ ಪ್ರಾಯವಾಗಿತ್ತು.

ಭಾರತೀಯ ಭೂಸೇನೆಯಲ್ಲಿ ವಿವಿಧ ಹುದ್ದೆಗಳನ್ನು ಪಡೆದು 1962ರ ಚೀನಾ, 1967ರ ಪಾಕಿಸ್ತಾನದೊಂದಿಗಿನ ಯುದ್ಧ ಹಾಗೂ 1972ರ ಬಾಂಗ್ಲಾ ವಿಮೋಚನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅವರು ದೇಶ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ನಿವೃತ್ತಿಯ ಬಳಿಕ ಉಡುಪಿಯ ಬಡಾನಿಡಿಯೂರಿನಲ್ಲಿ ನೆಲೆಸಿದ ಕ.ರಾವ್, ಮಾಜಿ ಸೈನಿಕರ ವೇದಿಕೆ, ಪೂರ್ಣಪ್ರಜ್ಞಾ ಕಾಲೇಜಿನ ಆಡಳಿತ ಮಂಡಳಿ, ಶ್ರೀಕೃಷ್ಣ ಬಾಲನಿಕೇತನ ಹಾಗೂ ಹಲವಾರು ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದರು. ಇವರು ಟ್ರಸ್ಟ್ ಮೂಲಕ ಬಡವರಿಗೆ ಆಸರೆಯಾಗಿದ್ದರು.

ಉಡುಪಿಯ ಯಕ್ಷಗಾನ ಕಲಾರಂಗ 2017ರಲ್ಲಿ ರಾಮಚಂದ್ರ ರಾವ್ ದಂಪತಿಗೆ ಎಸ್. ಗೋಪಾಲಕೃಷ್ಣ ಸಂಸ್ಮರಣಾ ‘ಸೇವಾಭೂಷಣ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಶಾಸಕ ಕೆ.ರಘುಪತಿ ಭಟ್, ಬಡಾನಿಡಿಯೂರು ಬಾಲಯ್ಯ ಕುಟುಂಬ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News