×
Ad

ಗಾಳಿ ಮಳೆ: ಉಡುಪಿ ಜಿಲ್ಲೆಯಲ್ಲಿ ಹಲವು ಮನೆಗಳಿಗೆ ಹಾನಿ; ಲಕ್ಷಾಂತರ ರೂ. ನಷ್ಟ

Update: 2021-06-15 20:53 IST

ಉಡುಪಿ, ಜೂ.15: ಜಿಲ್ಲೆಯಾದ್ಯಂತ ಮಂಗಳವಾರ ಉತ್ತಮ ಮಳೆ ಯಾಗಿದ್ದು, ಕಳೆದ 24ಗಂಟೆಗಳಲ್ಲಿ ಗಾಳಿಮಳೆಯಿಂದ ಹಲವು ಮನೆಗಳಿಗೆ ಹಾನಿ ಯಾಗಿ ಒಟ್ಟು 3.31ಲಕ್ಷ ರೂ. ನಷ್ಟ ಸಂಭವಿಸಿದೆ.

ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ಬೀಸಿದ ಭಾರೀ ಗಾಳಿಯಿಂದಾಗಿ ಪರಿಸರದ ಸುಮಾರು 12 ಮನೆಗಳಿಗೆ ಹಾನಿಯಾಗಿ ಒಟ್ಟು 1.39ಲಕ್ಷ ರೂ. ನಷ್ಟ ಉಂಟಾಗಿದೆ. ಇಲ್ಲಿನ ಕುಸುಮ ಮೊಗೇರ್ತಿ, ಗೋಪಾಲ ಪೂಜಾರಿ, ಲೀಲಮ್ಮ, ಸರೋಜ, ಗಂಗಾ, ಸಂಜೀವ ಮರಕಾಲ, ರಾಧಾ, ಇಂದಿರಾ, ಬಸವ, ಸತೀಶ, ಸರಸ್ವತಿ, ಅಕ್ಕಯ್ಯ ಎಂಬವರ ಮನೆಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ವಸಂತಿ ಮನೆ ಭಾಗಶಃ ಹಾನಿಯಾಗಿ 30,000ರೂ., ಬೈಂದೂರು ತಾಲೂಕಿನ ನಾವುಂದ ಗ್ರಾಮದ ಶಾಂತ ದೇವಾಡಿಗ ಮನೆಗೆ ಹಾನಿಯಾಗಿ 50,000ರೂ., ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಬಚ್ಚಿ ಶೆಡ್ತಿ ಮನೆಗೆ ಹಾನಿಯಾಗಿ 60,000ರೂ. ನಷ್ಟ ಉಂಟಾಗಿದೆ.

ಅದೇ ರೀತಿ ಉಡುಪಿ ತಾಲೂಕಿನ ಮೂಡುತೋನ್ಸೆ ಗ್ರಾಮದ ಸುರೇಂದ್ರ ಪೂಜಾರಿ, ಬ್ರಹ್ಮಾವರ ತಾಲೂಕಿನ ಯಡ್ತಾಡಿ ಗ್ರಾಮದ ಶಶಿಕಲಾ ಹಾಗೂ ಮಣೂರು ಗ್ರಾಮದ ಶಾರದಾ, ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದ ಮಹಾಬಲ, ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮದ ಬೇಬಿ ಶೆಡ್ತಿ ಎಂಬವರ ಮನೆಗಳಿಗೂ ಹಾನಿಯಾಗಿವೆ.

ಮರ ಬಿದ್ದು ಸಂಚಾರ ಸ್ಥಗಿತ

ಇಂದು ಮುಂಜಾನೆ ಬೀಸಿದ ಭಾರೀ ಗಾಳಿಮಳೆಯಿಂದಾಗಿ ಕಾಪು- ಶಿರ್ವ ರಸ್ತೆಯ ಕಾಪು ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದ ಸಮೀಪದ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಇದರಿಂದಾಗಿ ಕಾಪು - ಶಿರ್ವ ರಸ್ತೆಯಲ್ಲಿ ಸಂಚರಿಸುವ ಮತ್ತು ಮಜೂರು, ಮಲ್ಲಾರು, ಚಂದ್ರನಗರ, ಬೆಳಪು, ಕಳತ್ತೂರು ಸಹಿತ ವಿವಿಧೆಡೆಗಳಿಂದ ಕಾಪುವಿಗೆ ಆಗಮಿಸುವ ನಾಗರಿಕರಿಗೆ ಬಹಳಷ್ಟು ತೊಂದರೆ ಉಂಟಾಯಿತು. ಈ ಬಗ್ಗೆ ಮಾಹಿತಿ ಪಡೆದ ಸ್ಥಳೀಯರು ಮರವನ್ನು ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿ ಕೊಡಲು ಶ್ರಮಿಸಿದರು. ಅರಣ್ಯ ರಕ್ಷಕ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿದ್ದು, ಕಾಪು ಪೊಲೀಸರು ಸಂಾರ ನಿಯಂತ್ರಣದಲ್ಲಿ ಸಹಕರಿಸಿದರು.

ಕಾಂಕ್ರೀಟ್ ರಸ್ತೆ ಅಪಾಯದಲ್ಲಿ

ಸಮುದ್ರದ ಅಬ್ಬರಕ್ಕೆ ಪಡುಬಿದ್ರಿಯಲ್ಲಿ ಪ್ರವಾಸೋಧ್ಯಮ ಇಲಾಖೆ ರಚಿಸಿದ ಕಾಂಕ್ರೀಟ್ ತಡೆಗೋಡೆ ಅಪಾಯದಲ್ಲಿದೆ. ತೀರದಲ್ಲಿರುವ ವಿದ್ಯುತ್ ದೀಪದ ಕಂಬಗಳ ಬುಡದ ಮರಳು ಕೊಚ್ಚಿಹೋಗಿದ್ದು, ಬೀಳುವ ಸ್ಥಿತಿಯಲ್ಲಿದೆ. ಕೆಲವೆಡೆ ತೆಂಗಿನ ಮರಗಳು ಸಮುದ್ರ ಪಾಲಾಗುವ ಅಪಾಯದಲ್ಲಿದೆ.

ಕಾಪು ತಾಲೂಕಿನ ಎಲ್ಲೂರು ಗ್ರಾಮದ ಗೋಪಾಲಕೃಷ್ಣ ಎಂಬವರ ಅಡಿಕೆ ತೋಟಕ್ಕೆ ಮರ ಬಿದ್ದು ಒಟ್ಟು 16 ಅಡಿಕೆ ಮರಗಳಿಗೆ ಹಾನಿಯಾಗಿ ಒಟ್ಟು 6ಸಾವಿರ ರೂ. ನಷ್ಟವಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಮೆಸ್ಕಾಂಗೆ 19.91ಲಕ್ಷ ರೂ. ನಷ್ಟ

ಗಾಳಿಮಳೆಯಿಂದ ಜಿಲ್ಲೆಯಲ್ಲಿ ಇಂದು 107 ವಿದ್ಯುತ್ ಕಂಬಗಳು, ಎಂಟು ಟಾನ್ಸ್ ಫಾರ್ಮರ್‌ಗಳು ಧರೆಗೆ ಉರುಳಿದಿದ್ದು, 2.32ಕಿ.ಮೀ. ಉದ್ದದ ವಿದ್ಯುತ್ ತಂತಿಗೆ ಹಾನಿಯಾಗಿದೆ. ಇದರಿಂದ ಮೆಸ್ಕಾಂಗೆ ಒಟ್ಟು 19.91ಲಕ್ಷ ರೂ. ನಷ್ಟವಾಗಿದೆ.
ಕಳೆದ 15 ದಿನಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 442 ವಿದ್ಯುತ್ ಕಂಬಗಳು, 47 ಟ್ರಾನ್ಸ್‌ಫಾರ್ಮರ್, 11.32ಕಿ.ಮೀ. ಉದ್ದದ ತಂತಿಗಳು ಧರೆಗೆ ಉರುಳಿದ್ದು, ಇದರಿಂದ ಒಟ್ಟು 98.55ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News