ಕೆ.ಕೆ.ಹೆಬ್ಬಾರ್ ಕುರಿತ ಕೃತಿ ಮತ್ತು ಕಿರುಚಿತ್ರಗಳ ಬಿಡುಗಡೆ

Update: 2021-06-15 15:37 GMT

ಮಣಿಪಾಲ, ಜೂ.15: ವಿಶ್ವಪ್ರಸಿದ್ಧ ಚಿತ್ರಕಲಾವಿದ ಕೆ.ಕೆ.ಹೆಬ್ಬಾರ್ ಅವರ 110ನೆಯ ಹುಟ್ಟುಹಬ್ಬದ ಸಂಭ್ರಮವನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ಹೆಬ್ಬಾರರ ಕುರಿತ ಪುಸ್ತಕ ಹಾಗೂ ಕಿರುಚಿತ್ರಗಳನ್ನು ಲೋಕಾರ್ಪಣೆಗೊಳಿಸುವ ಮೂಲಕ ಆಚರಿಸಿತು.

ಸಂಸ್ಥೆಯು ಸೆಲಬ್ರೇಟಿಂಗ್ ಹೆಬ್ಬಾರ್ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಆಯೋಜಿಸಿತು. ಮಾಹೆ ಕುಲಪತಿ ಲೆ.ಜ.(ಡಾ.) ಎಂ.ಡಿ.ವೆಂಕಟೇಶ್ ಅವರು ಕೆ.ಕೆ.ಹೆಬ್ಬಾರ್ ಕುರಿತ ‘ಲೈಫ್ ಆ್ಯಂಡ್ ಆರ್ಟ್ ಆಫ್ ಹೆಬ್ಬಾರ್’ ಗ್ರಂಥವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ಇತರ ಪದವಿ ಕಲಿಯುವ ವಿದ್ಯಾರ್ಥಿಗಳು ಸಂಗೀತ, ನೃತ್ಯ ಮತ್ತು ಲಲಿತಕಲೆಗಳಲ್ಲಿ ಅಭಿರುಚಿ ಬೆಳೆಸಿ ಕೊಳ್ಳುವ ಅವಕಾಶ ನೀಡುವ ಮಹತ್ವದ ಪ್ರಯತ್ನವನ್ನು ಮಾಹೆ ಮಾಡುತ್ತಿದೆ. ಈ ದಿಶೆಯಲ್ಲಿ ಮಾಹೆ, ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್‌ನ್ನು (ಎಚ್‌ಜಿಎಸಿ)ಆರಂಭಿಸುವ ಮೂಲಕ ಪ್ರಮುಖ ಹೆಜ್ಜೆ ಇರಿಸಿದೆ. ಪ್ರಸ್ತುತ ಮಾಹೆಯ ಪ್ರಸಾರಾಂಗ ವಿಭಾಗವಾಗಿರುವ ಮಣಿಪಾಲ ಯೂನಿವರ್ಸಲ್ ಪ್ರೆಸ್ ಮೂಲಕ ಮಹತ್ವದ ಈ ಕೃತಿಯನ್ನು ಪ್ರಕಟಿಸುವುದಕ್ಕೆ ಅಭಿಮಾನವೆನಿಸುತ್ತಿದೆ ಎಂದರು.

ರಾ.ಶಿಕ್ಷಣ ನೀತಿ ಅನುಷ್ಠಾನ: ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ಗಂಭೀರ ಚರ್ಚೆ ನಡೆಯುತ್ತಿರುವ ಈ ಸಂದರ್ಭದಲ್ಲಿ ಮಣಿಪಾಲ ವಿಶ್ವವಿದ್ಯಾನಿಲಯವು ಅದನ್ನು ಅನುಷ್ಠಾನಗೊಳಿಸುವಲ್ಲಿ ಕ್ರಿಯಾಶೀಲ ಹೆಜ್ಜೆಯನ್ನಿರಿಸಿದ್ದು, ಎಲ್ಲರನ್ನೂ ಒಳಗೊಳ್ಳುವಂಥ ಅಂದರೆ, ವಿಶೇಷವಾಗಿ ಸ್ಥಳೀಯ ಲೇಖಕರು, ಕವಿಗಳು, ಕಲಾವಿದರು, ನಟರು ಮೊದಲಾದವರನ್ನು ಸೇರಿಸಿಕೊಂಡು ರೂಪಿಸುವ ಯೋಜನೆಯನ್ನು ಹಂತಹಂತವಾಗಿ ಕೈಗೊಳ್ಳಲು ಸಿದ್ಧವಾಗಿದೆ’ ಎಂದು ಡಾ. ಎಂ. ಡಿ.ವೆಂಕಟೇಶ್ ನುಡಿದರು.

ವಿಶೇಷ ಭಾಷಣ ಮಾಡಿದ ಮಾಹೆಯ ಕಾರ್ಯಕಾರಿ ಉಪಾಧ್ಯಕ್ಷ ಡಾ. ಎಚ್.ವಿನೋದ್ ಭಟ್, ಕೆ.ಕೆ. ಹೆಬ್ಬಾರ್ ಕರಾವಳಿಯಲ್ಲಿ ಜನಿಸಿ ವಿಶ್ವಮಟ್ಟಕ್ಕೆ ಏರಿದವರು. ಆಧುನಿಕ ಕಲಾಚಿಂತನೆಯಿಂದ ಪ್ರಭಾವಿತರಾದ ಅವರಿಗೆ ತವರೂರಿ ಗಿಂತ ಯುರೋಪಿನಲ್ಲಿಯೇ ಹೆಚ್ಚಿನ ಗೌರವ ದೊರೆತಿದೆ. ಅವರ ಕಲೆ ಕೇರಳದ ಸಂಸ್ಕೃತಿಯಿಂದ ಪ್ರಭಾವಿತಗೊಂಡಿದೆ ಎಂಬುದು ಸರಿಯಲ್ಲ. ಹೆಬ್ಬಾರರ ಕಲೆ ಅಪ್ಪಟ ಕರಾವಳಿ ಸಂಸ್ಕೃತಿಯ ಪ್ರತಿಬಿಂಬ’ ಎಂದರು.

ಕೆ.ಕೆ.ಹೆಬ್ಬಾರರ ಸಂಸ್ಮರಣ ನುಡಿಗಳನ್ನಾಡಿದ ಪ್ರಸಿದ್ಧ ಕಲಾ ಇತಿಹಾಸಜ್ಞೆ ಲಿನಾ ವಿನ್ಸೆಂಟ್, ಕೆ.ಕೆ.ಹೆಬ್ಬಾರರು ಹೇಗೆ ಸ್ವಂತವಾದ ಕಲಾಮಾರ್ಗವನ್ನು ರೂಪಿಸಿ ಕೊಂಡು ಅದರಲ್ಲಿ ಸಾಗಿ ಉಳಿದ ಕಲಾವಿದರಿಗೆ ಸ್ಪೂರ್ತಿಯಾದರು ಎಂಬುದನ್ನು ವಿವರಿಸಿದರು.

ಆರ್ಟ್ ಆ್ಯಂಡ್ ಲೆಫ್ ಆಫ್ ಹೆಬ್ಬಾರ್ ಕೃತಿಯ ಮೂಲ ಕನ್ನಡ ಲೇಖಕ ರಾದ ಕು.ಶಿ.ಹರಿದಾಸ ಭಟ್ ಮತ್ತು ಕೆ.ಕೆ.ಹೆಬ್ಬಾರರ ನಡುವಿನ ಸ್ನೇಹ ಸಂಬಂಧ ವನ್ನು ಜಯದೇವ ಭಟ್ ನೆನಪಿಸಿಕೊಂಡರು. ಮೂಲ ಕನ್ನಡ ಕೃತಿಯನ್ನು ಆಂಗ್ಲ ಭಾಷೆಗೆ ಅನುವಾದಿಸಿದ ಅನುಭವವನ್ನು ಸಂಧ್ಯಾ ವಾಸುದೇವ್ ಹಂಚಿಕೊಂಡರು.

ಹೆಬ್ಬಾರ್ ಗ್ಯಾಲರಿ ಆ್ಯಂಡ್ ಆರ್ಟ್ ಸೆಂಟರ್‌ನ ಭಾವಚಿತ್ರಗಳಲ್ಲಿ ಹೆಬ್ಬಾರರು ಮತ್ತು ಹೆಬ್ಬಾರರ ಕಲಾಪರಂಪರೆ ಎಂಬ ಎರಡು ಕಿರುಚಿತ್ರಗಳನ್ನು ಇದೇ ವೇಳೆ ಪ್ರದರ್ಶಿಸಲಾಯಿತು. ಕೊನೆಯಲ್ಲಿ ಕೃತಿ ಹಾಗೂ ಹೆಬ್ಬಾರರ ಕಲೆಯ ಕುರಿತು ನಡೆದ ಸಂವಾದವನ್ನು ಡಾ. ನೀತಾ ಇನಾಂದಾರ್, ಡಾ. ನಿಖಿಲ್ ಗೋವಿಂದ್ ಮತ್ತು ಡಾ.ಸೃಜನಾ ಕಾಯ್ಕಿಣಿ ನಡೆಸಿಕೊಟ್ಟರು.

ಮಾಹೆ ಸಂಸ್ಥೆಯ ವಸಂತಿ ಆರ್. ಪೈ, ಡಾ.ರಂಜನ್ ಪೈ, ಶ್ರುತಿ ಆರ್. ಪೈ, ಮಾಹೆಯ ಪ್ರೊ ಚಾನ್ಸಲರ್ ಡಾ. ಎಚ್. ಎಸ್ ಬಲ್ಲಾಳ್, ಹೆಬ್ಬಾರರ ಪುತ್ರಿಯರಾದ ರೇಖಾ ರಾವ್, ರಜನೀ ಪ್ರಸನ್ನ, ಡಾ.ಡಿ.ಎ. ಪ್ರಸನ್ನ ಉಪಸ್ಥಿತರಿದ್ದರು. ಅನುಷಾ ರವಿಶಂಕರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News