×
Ad

ಮಂಗಳೂರು: ಎರಡು ಸೈಬರ್ ಕ್ರೈಂ ಪ್ರಕರಣ ಪತ್ತೆ; ದೂರು ದಾಖಲು

Update: 2021-06-15 21:13 IST

ಮಂಗಳೂರು, ಜೂ.15: ಕೋವಿಡ್-19 ಸಂಕಷ್ಟ ಕಾಲದಲ್ಲೂ ನಗರದಲ್ಲಿ ಸೈಬರ್ ಕ್ರೈಂ ಪ್ರಕರಣ ಹೆಚ್ಚುತ್ತಿದ್ದು, ಕಳೆದ ಎರಡು ದಿನದಲ್ಲಿ ಎರಡು ಪ್ರಕರಣ ಬೆಳಕಿಗೆ ಬಂದಿದೆ. ಒಬ್ಬಾತ ಹಣ ಪಾವತಿಸುವ ಬಗ್ಗೆ ಲಿಂಕ್ ಕಳುಹಿಸಿ ವಂಚಿಸಿದರೆ, ಇನ್ನೊಮ್ಮೆ ಎಸ್‌ಎಂಎಸ್ ಮಾಡಿ ಹಣ ಲಪಟಾಯಿಸಿದ್ದಾನೆ.

ಜೂ.14ರಂದು ಬೆಳಗ್ಗೆ ಡಿಟಿಡಿಸಿ ಕೊರಿಯರ್ ಸಂಸ್ಥೆಯಿಂದ ಮಾತನಾಡುವುದಾಗಿ ಹೇಳಿದ ವ್ಯಕ್ತಿಯೊಬ್ಬ ತಾವು ಕಳುಹಿಸಿರುವ ಪಾರ್ಸೆಲ್‌ನಲ್ಲಿ ಏರಿಯಾ ಪಿನ್ ಕೋಡ್ ತಪ್ಪಾಗಿ ನಮೂದಾಗಿದೆ. ಪಾರ್ಸೆಲ್ ಡೆಲಿವರಿ ಮಾಡಬೇಕಾದರೆ 10 ರೂ. ಪಾವತಿಸುವಂತೆ ತನ್ನ ಮೊಬೈಲ್ ಸಂಖ್ಯೆಗೆ ಹಣ ಪಾವತಿಸುವ ಲಿಂಕ್ ಕಳುಹಿಸಿಕೊಟ್ಟಿದ್ದಾನೆ. ಆ ಲಿಂಕ್ ಮೂಲಕ ಯುಪಿಐ ಪಿನ್ ನಮೂದಿಸಿ ಗ್ರಾಹಕರು 10 ರೂ. ಪಾವತಿಸಿದ್ದಾರೆ. ನಂತರ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಕೆನರಾ, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಗಳಿಂದ ಹಂತ ಹಂತವಾಗಿ 1.69 ಲಕ್ಷ ರೂ.ವನ್ನು ಅಪರಿಚಿತ ವ್ಯಕ್ತಿಯ ಬೇರೆ ಖಾತೆಗಳಿಗೆ ವರ್ಗಾವಣೆಗೊಂಡಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎಸ್‌ಎಂಎಸ್ ಕಳುಹಿಸಿ ವಂಚನೆ

ಅಪರಿಚತ ವ್ಯಕ್ತಿಯೊಬ್ಬ ಎಸ್‌ಎಂಎಸ್‌ನಲ್ಲಿ ಲಿಂಕೊಂದನ್ನು ಕಳುಹಿಸಿ ಒಟಿಪಿ ಪಡೆದು 65 ಸಾವಿರ ರೂ. ವರ್ಗಾಯಿಸಿ ವಂಚನೆ ಮಾಡಿದ ಘಟನೆ ಜೂ.13ರಂದು ನಡೆದಿದೆ. ಲಿಂಕ್ ಒತ್ತಿದ ತಕ್ಷಣ ಎಸ್‌ಬಿಐ ಬ್ಯಾಂಕ್‌ನ ವೆಬ್‌ಸೈಟ್ ಕಾಣುವಂತೆ ಪೇಜ್ ತೆರೆಯ ಲ್ಪಟ್ಟಿದೆ. ಅದರಲ್ಲಿ ಹೆಸರು ಮತ್ತು ಪಾಸ್‌ವರ್ಡ್ ತುಂಬಲು ತಿಳಿಸಿ ನಂತರ ಒಟಿಪಿ ವಿವರ ಪಡೆದು ಹಂತ ಹಂತವಾಗಿ ದೂರುದಾರರ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 65 ಸಾವಿರ ರೂ.ವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿರು ವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಎರಡೂ ಪ್ರಕರಣದ ಬಗ್ಗೆ ಸೈಬರ್ ಕ್ರೈಂ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News