ರೈತ ಸುರಕ್ಷ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಪ್ರಾರಂಭ

Update: 2021-06-15 15:49 GMT

ಮಂಗಳೂರು, ಜೂ.15: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷ ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆಗೆ ನೋಂದಣಿ ಪ್ರಾರಂಭವಾಗಿದೆ. ಪ್ರಸಕ್ತ ಸಾಲಿನಲ್ಲಿ ಯೂನಿವರ್ಸಲ್ ಸೋಂಪೊ ಇನ್ಸೂರೆನ್ಸ್ ಕಂಪನಿ ಸಂಸ್ಥೆಯನ್ನು ಜಿಲ್ಲೆಗೆ ನಿಗದಿಪಡಿಸಲಾಗಿದೆ.

ಅಧಿಸೂಚಿತ ಬೆಳೆ - ಭತ್ತ (ಮಳೆ ಆಶ್ರಿತ) ರೈತರು ಪ್ರತಿ ಎಕರೆಗೆ 440 ರೂ. ಅಥವಾ ಪ್ರತಿ ಹೆಕ್ಟೇರಿಗೆ 1,100 ರೂ. ಪಾವತಸಿಬೇಕಾಗಿದೆ. ಅರ್ಜಿ, ಪಹಣಿ, ಖಾತೆ, ಪಾಸ್‌ಪುಸ್ತಕ, ಕಂದಾಯ ರಶೀದಿ, ಆಧಾರ್ ಕಾರ್ಡ್ ಹಾಜರುಪಡಿಸಿ ವಿಮೆ ನೋಂದಾಯಿಸಬಹುದಾಗಿದೆ.

ಹೊಸ ಮಾರ್ಗಸೂಚಿಯನ್ವಯ ಈ ಬಾರಿ ಸಾಲ ಪಡೆದ ರೈತರಿಗೆ ಬೆಳೆ ವಿಮೆಯಡಿ ಒಳಪಡುವುದು ಐಚ್ಛಿಕವಾಗಿರುತ್ತದೆ. ಆಸಕ್ತಿ ಇಲ್ಲದ ರೈತರು ಬ್ಯಾಂಕ್‌ಗಳಲ್ಲಿ ನಿರಾಕರಣಾ ಪತ್ರವನ್ನು ನೀಡಿ ನೋಂದಣಿಯಿಂದ ಹೊರ ಉಳಿಯಬಹುದು. (ನಿರಾಕರಣಾ ಪತ್ರವನ್ನು ನೋಂದಣಿಯ ಕೊನೆಯ ದಿನಾಂಕಕ್ಕಿಂತ ಏಳು ದಿನ ಮುಂಚಿತವಾಗಿ ನೀಡಬೇಕು) ನೋಂದಣಿಗೆ ಆ.16 ಕೊನೆಯ ದಿನವಾಗಿದೆ.

ಬೆಳೆ ಕಟಾವು ಪ್ರಯೋಗಗಳ ಆಧಾರದ ಮೇಲೆ ಇಳುವರಿ ಮಾಹಿತಿಯನ್ನು ಪರಿಗಣಿಸಿ ಬೆಳೆ ನಷ್ಟ ನಿರ್ಧಾರವನ್ನು ಆಯಾ ಪ್ರದೇಶಕ್ಕೆ ಮಾಡಲಾಗುವುದು. ಬಿತ್ತನೆ ವಿಫಲಗೊಂಡಲ್ಲಿ -ಮಳೆಯ ಅಭಾವ/ಪ್ರತಿಕೂಲ ಹವಾಮಾನ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರ ವಿಫಲಗೊಂಡಲ್ಲಿ ಶೇ.25ರಷ್ಟು ಪರಿಹಾರ ಪಡೆಯಲು ವರದಿ ಮಾಡಿಕೊಳ್ಳಲು ಆಗಸ್ಟ್ 31 ಕೊನೆಯ ದಿನವಾಗಿರುತ್ತದೆ.

ಮಧ್ಯಂತರ ವಿಕೋಪಗಳಾದ-ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಬೆಂಕಿ ಅವಘಡಗಳಿಗೆ ವೈಯಕ್ತಿಕವಾಗಿ ನಿರ್ಧಾರ, 48 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ. ಬಿತ್ತನೆಯಾದ ನಂತರ ಕಟಾವಿಗೆ ಮೊದಲು ಸಾಮಾನ್ಯ ಇಳುವರಿಗಿಂತ ಶೇ.50ಕ್ಕಿಂತ ಹೆಚ್ಚಿನ ಬೆಳೆ ಹವಾಮಾನ ವೈಪರೀತ್ಯದಿಂದ ನಷ್ಟ ಸಂಭವಿಸಿದಲ್ಲಿ ಶೇ.25 ಮುಂಚಿತವಾಗಿ ಪರಿಹಾರ ನೀಡಲಾಗುವುದು. ಬೆಳೆ ಕಟಾವಿನ ನಂತರ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟಂತಹ ಸಂದರ್ಭ - ಕಟಾವು ಮಾಡಿದ 14 ದಿನಗಳ ಒಳಗೆ ಮಳೆ ಮತ್ತು ಆಲಿಕಲ್ಲು ಮಳೆಯಿಂದ ನಷ್ಟವಾದಲ್ಲಿ 48 ಗಂಟೆಯೊಳಗೆ ವಿಮಾ ಸಂಸ್ಥೆಗೆ ಮಾಹಿತಿ ನೀಡಬೇಕಾಗಿರುತ್ತದೆ. ಹೆಚ್ಚಿನ ವಿವರಗಳಿಗೆ ಹೋಬಳಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News