ಸರಕಾರದ ಅವೈಜ್ಞಾನಿಕ ನಿರ್ಧಾರದಿಂದ ಸರಕಾರಿ ಶಿಕ್ಷಕರಿಗೆ ಸಂಕಷ್ಟ: ಸಿಎಫ್‌ಐ ಆರೋಪ

Update: 2021-06-15 15:55 GMT

ಮಂಗಳೂರು, ಜೂ.15: ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಹಾಜರಾಗಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿರುವುದರಿಂದ ಸರಕಾರಿ ಶಿಕ್ಷಕರಿಗೆ ಸಂಕಷ್ಟ ಎದುರಾಗಿದೆ ಎಂದು ಸಿಎಫ್‌ಐ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ 2ನೆ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹೊರಡಿಸಿದ್ದ ಲಾಕ್‌ಡೌನ್‌ಗೆ ತೆರೆ ಎಳೆದು ಇದೀಗ ಕೆಲವು ಜಿಲ್ಲೆಗಳಲ್ಲಿ ಸಡಿಲಿಕೆ ಮಾಡಲಾಗಿದೆ. ಆದರೆ ಸರಕಾರವು ವಾಹನ ಸಂಚಾರ ವ್ಯವಸ್ಥೆಯ ಕುರಿತು ಸೂಕ್ತ ತೀರ್ಮಾನ ಕೈಗೊಂಡಿಲ್ಲ. ಅನ್‌ಲಾಕ್ ಇರುವ ಜಿಲ್ಲೆಗಳಲ್ಲಿ ಸಂಚಾರ ವ್ಯವಸ್ಥೆ ಇಲ್ಲದೆ ದೂರದ ಹಳ್ಳಿಗಳಿಗೆ ಮತ್ತು ಹಳ್ಳಿಯಿಂದ ನಗರಕ್ಕೆ ಬರುವ ಶಿಕ್ಷಕರು ಶಾಲೆಗೆ ಹಾಜರಾಗುವುದು ಹೇಗೆ ಎಂಬುವುದನ್ನು ಸರಕಾರ ಯೋಚಿಸದಿರುವುದು ವಿಪರ್ಯಾಸ. ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವ ಎಲ್ಲ ಸಿಬ್ಬಂದಿಗೆ ಆರೋಗ್ಯದ ಭದ್ರತೆಯ ದೃಷ್ಟಿಯಿಂದ ಉಚಿತವಾಗಿ ಲಸಿಕೆಯನ್ನು ನೀಡಿದ ನಂತರ ಮತ್ತು ಸರಕಾರಿ ಬಸ್ ಸಂಚಾರ ಪ್ರಾರಂಭವಾದ ಬಳಿಕ ಶಾಲೆಗಳಿಗೆ ಶಿಕ್ಷಕರು ಹಾಜರಾಗಲು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News