ಕೊಣಾಜೆ ಗ್ರಾಮ ಸೀಲ್ಡೌನ್; ಕೊರೋನ ಸೋಂಕು ಕಡಿಮೆಗೊಳಿಸಲು ಕಟ್ಟುನಿಟ್ಟಿನ ಕ್ರಮ: ಚಂಚಲಾಕ್ಷಿ

Update: 2021-06-15 16:15 GMT

ಕೊಣಾಜೆ:  ಜೂ.14 ರಿಂದ ಜೂ.21 ರವರೆಗೆ  ಜಿಲ್ಲಾಡಳಿತದ ಆದೇಶದಂತೆ ಕೊಣಾಜೆ ಗ್ರಾಮವನ್ನು ಸಂಪೂರ್ಣ ಸೀಲ್ ಡೌನ್  ಮಾಡಲಾಗಿದೆ. ಗ್ರಾಮಸ್ಥರು ಸಹಕರಿಸಬೇಕು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂಚಲಾಕ್ಷಿ ಹೇಳಿದ್ದಾರೆ.

ಕೊಣಾಜೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮದ 50 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಕಂಡುಬಂದ ಪ್ರದೇಶಗಳಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಿ , ವೈದ್ಯಕೀಯ ತಪಾಸಣೆ ಆರಂಭಿಸಲಾಗಿದೆ. ಕೊಣಾಜೆ ಗ್ರಾಮ ಸಂಪರ್ಕಿಸುವ  ರಾಜ್ಯ ಹಾಗೂ ರಾಷ್ಟ್ರೀಯ  ಹೆದ್ದಾರಿ  ಹೊರತುಪಡಿಸಿ ಏಳು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಬ್ಯಾಂಕ್, ಮದ್ಯದಂಗಡಿ ಸೇರಿದಂತೆ  ಎಲ್ಲಾ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿ ಕಟ್ಟುನಿಟ್ಟಿನ ಶಿಸ್ತು ಜಾರಿಗೊಳಿಸಲಾಗಿದೆ. ಗ್ರಾಮದ ಎರಡು ನ್ಯಾಯಬೆಲೆ ಅಂಗಡಿಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿದೆ.     ತುರ್ತು ಅವಶ್ಯಕತೆ ಇದ್ದವರಿಗೆ  ಮಾತ್ರ ಹೋಗಲು ಅವಕಾಶ ಮಾಡಿಕೊಡಲಾಗಿದೆ. ಪ್ರತಿ ಗ್ರಾಮದ ಗಡಿಭಾಗದಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಆಹಾರ ಸಾಮಗ್ರಿಗಳನ್ನು ವಿತರಿಸಲು ಕೋವಿಡ್ ಕಾರ್ಯ ರಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು , ಗ್ರಾ.ಪಂ ಸದಸ್ಯರಿರುವ ಟಾಸ್ಕ್ ಫೋರ್ಸ್‍ನವರು ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಿದ್ದಾರೆ. ಸಾಮಗ್ರಿಗಳನ್ನು  ಮನೆಯವರೆಗೆ ತಲುಪಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಹಣವನ್ನು ಸ್ಥಳದಲ್ಲೇ ಪಾವತಿ ಮಾಡಬಹುದು.  ಗ್ರಾಮಕ್ಕೆ   ಹೋಂಗಾರ್ಡ್ , ಪೊಲೀಸರ ಅವಶ್ಯಕತೆ ಇದೆ ಅನ್ನುವ ಕುರಿತು ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಗಿದೆ.  ಗ್ರಾಮಕ್ಕೆ  ನಾಟೆಕಲ್ ಪ್ರಾಥಮಿಕ ಆರೋಗ್ಯ ಕೇಂದ್ರ ಮಾತ್ರ ಇರುವುದರಿಂದ ಅಂಬ್ಲಮೊಗರು, ಬೋಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ತಂಡವನ್ನು ಹೆಚ್ಚುವರಿಯಾಗಿ ಪಡೆದುಕೊಳ್ಳಲಾಗಿದೆ.  2- 3 ದಿನ ಸಹಕರಿಸಿದಲ್ಲಿ ಕೊರೋನವನ್ನು  ಸಂಪೂರ್ಣವಾಗಿ ಕಡಿಮೆಗೊಳಿಸಬಹುದು.   ಕೊಣಾಜೆಯ ಅಭಯಾಶ್ರಮದಲ್ಲಿ ಹೆಚ್ಚಿನ ಪ್ರಕರಣವಿರುವುದರಿಂದ ಗ್ರಾಮವನ್ನು ಸೀಲ್‍ಡೌನ್ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸೋಂಕಿತರೆಲ್ಲರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಒಬ್ಬರು ಸಾವನ್ನಪ್ಪಿದ್ದಾರೆ. ಗ್ರಾಮದಲ್ಲಿ ಒಟ್ಟು  79 ಪ್ರಕರಣಗಳು ಸಕ್ರಿಯವಾಗಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಮಕೃಷ್ಣ ಪಟ್ಟೋರಿ, ಮಾಜಿ ಅಧ್ಯಕ್ಷರುಗಳಾದ ನಝರ್ ಷಾ ಪಟ್ಟೋರಿ,  ಅಚ್ಯುತ್ತ ಗಟ್ಟಿ ಹಾಗೂ ಸದಸ್ಯರುಗಳಾದ ಇಕ್ಬಾಲ್ ಕೊಣಾಜೆ, ಪ್ರೇಮದಾಸ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News