ಗಾಝಾ ಮೇಲೆ ಇಸ್ರೇಲ್ ಮತ್ತೆ ವಾಯುದಾಳಿ

Update: 2021-06-16 03:46 GMT
ಫೋಟೊ ಕೃಪೆ:twitter.com

ಫೆಲೆಸ್ತೀನ್, ಜೂ.16: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಬುಧವಾರ ಮುಂಜಾನೆ ಮತ್ತೆ ವಾಯುದಾಳಿ ಆರಂಭಿಸಿದೆ. ಫೆಲೆಸ್ತೀನ್ ಪ್ರದೇಶದಲ್ಲಿರುವ ಉಗ್ರರು ಅಗ್ನಿಸ್ಪರ್ಶನ ಬಲೂನ್ ಒಂದನ್ನು ದೇಶದ ದಕ್ಷಿಣ ಭಾಗಕ್ಕೆ ಹಾರಿಬಿಟ್ಟ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿರುವುದಾಗಿ ಇಸ್ರೇಲ್ ಹೇಳಿದೆ. 

ಕಳೆದ ತಿಂಗಳು ಉಭಯ ಪಕ್ಷಗಳ ನಡುವೆ ನಡೆದ ಸಂಘರ್ಷದಲ್ಲಿ ನೂರಾರು ಜನ ಹತ್ಯೆಯಾದ ಬಳಿಕ ಕದನ ವಿರಾಮ ಘೋಷಿಸಲಾಗಿತ್ತು. ಆ ಬಳಿಕ ಇಸ್ರೇಲ್ ನಡೆಸಿದ ಮೊದಲ ದಾಳಿ ಇದಾಗಿದೆ. ನಫ್ತಾಲಿ ಬೆನೆಟ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಡೆದ ಮೊದಲ ದಾಳಿಯೂ ಇದಾಗಿದೆ.

ಪ್ರಧಾನಿಯಾಗಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಪದಚ್ಯುತಗೊಳಿಸಿದ ಬೆನೆಟ್ ರವಿವಾರವಷ್ಟೇ ಅಧಿಕಾರ ವಹಿಸಿಕೊಂಡಿದ್ದರು.
ಫೆಲೆಸ್ತೀನಿ ಮೂಲಗಳ ಪ್ರಕಾರ, ಇಸ್ರೇಲ್ ವಾಯುಪಡೆ ಗಾಝಾಪಟ್ಟಿಯ ದಕ್ಷಿಣಕ್ಕಿರುವ ಖಾನಾ ಯೂನಿಸ್‌ನ ಪೂರ್ವದ ಕೇಂದ್ರವನ್ನು ಗುರಿ ಮಾಡಿ ದಾಳಿ ನಡೆಸಿದೆ.
ಬೆಂಕಿ ಸ್ಪರ್ಶದ ಬಲೂನ್‌ಗೆ ಪ್ರತ್ಯುತ್ತರವಾಗಿ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ರಕ್ಷಣಾ ಪಡೆ ಹೇಳಿಕೊಂಡಿದೆ. ಯುದ್ಧವಿಮಾನಗಳು ಹಮಾಸ್ ಸಂಘಟನೆಯ ಮಿಲಿಟರಿ ಆವರಣ ಗೋಡೆಯ ಮೇಲೆ ದಾಳಿ ನಡೆಸಿವೆ ಎಂದು ರಕ್ಷಣಾ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News