ಕುಲಭೂಷಣ್ ಜಾಧವ್ ಪ್ರಕರಣ ಅಕ್ಟೋಬರ್ 5ಕ್ಕೆ ಮುಂದೂಡಿಕೆ

Update: 2021-06-16 03:58 GMT

ಇಸ್ಲಾಮಾಬಾದ್, ಜೂ.16: ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣ ದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್‌ಗೆ ವಕೀಲರನ್ನು ನೇಮಿಸುವ ಸಂಬಂಧದ ಪ್ರಕರಣವನ್ನು ಇಸ್ಲಾಮಾಬಾದ್ ಹೈಕೋರ್ಟ್ ಮಂಗಳವಾರ ಅಕ್ಟೋಬರ್ 5ಕ್ಕೆ ಮುಂದೂಡಿದೆ.

ಜಾಧವ್ ಪ್ರಕರಣದ ಮೂರು ವಿವಾದಾತ್ಮಕ ವಿಷಯಗಳಲ್ಲಿ ವಕೀಲರ ನೇಮಕವೂ ಒಂದು. ಈ ಕಾರಣದಿಂದಾಗಿ ಭಾರತ ಮೇಲ್ಮನವಿ ವಿಚಾರಣೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಇತರ ಎರಡು ಸಮಸ್ಯೆಗಳೆಂದರೆ, ಭಾರತೀಯ ವಕೀಲರು ಜಾಧವ್ ಅವರನ್ನು ಮುಕ್ತವಾಗಿ ಭೇಟಿ ಮಾಡಲು ಅವಕಾಶ ಕಲ್ಪಿಸಬೇಕು ಎನ್ನುವುದು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಕಡತಗಳ ಪರಿಶೀಲನೆಗೆ ಅವಕಾಶ ನೀಡಬೇಕು ಎನ್ನುವುದು. ಜಾಧವ್ ಪರ ಭಾರತೀಯ ವಕೀಲರನ್ನು ನೇಮಕ ಮಾಡುವ ಪ್ರಸ್ತಾವವನ್ನು ಪಾಕಿಸ್ತಾನ ಇದುವರೆಗೂ ತಳ್ಳಿಹಾಕುತ್ತಾ ಬಂದಿದೆ. ಅದಾದ ಬಳಿಕ ಕ್ವೀನ್ಸ್ ಕೌನ್ಸೆಲ್ ಬಗೆಗಿನ ಭಾರತದ ಮನವಿಯನ್ನೂ ಪಾಕಿಸ್ತಾನ ತಳ್ಳಿಹಾಕಿತ್ತು.

ಮಂಗಳವಾರ ನಡೆದ ವಿಚಾರಣೆಯಲ್ಲಿ ಪಾಕಿಸ್ತಾನ ಸರ್ಕಾರದ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಖಾಲೀದ್ ಜಾವೇದ್ ಖಾನ್, ಪ್ರಕರಣದ ಮುಂದೂಡಿಕೆಗೆ ಮನವಿ ಮಾಡಿದರು. ಮುಖ್ಯ ನ್ಯಾಯಮೂರ್ತಿ ಅಥರ್ ಮಿನಲ್ಲಾ, ನ್ಯಾಯಮೂರ್ತಿಗಳಾದ ಆಮೀರ್ ಫಾರೂಕ್ ಮತ್ತು ಮಿಯಾಂಗುಲ್ ಹಸನ್ ಔರಂಗಝೇಬ್ ಅವರಿದ್ದ ನ್ಯಾಯಪೀಠ ಪ್ರಕರಣದ ವಿಚಾರಣೆ ನಡೆಸುತ್ತಿದೆ.

ಮುಂದಿನ ದಿನಾಂಕದಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಭಾರತೀಯ ಹೈಕಮಿಷನ್ ವಕೀಲರಿಗೆ ಕೋರ್ಟ್ ನೋಟಿಸ್ ನೀಡಿದೆ. ಮಿಲಿಟರಿ ನ್ಯಾಯಾಲಯದ ನೀಡಿದ ತೀರ್ಪಿನ ವಿರುದ್ಧ ನಾಗರಿಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಜಾಧವ್‌ಗೆ ಅನುವು ಮಾಡಿಕೊಡುವ ಮಸೂದೆಗೆ ಇತ್ತೀಚೆಗೆ ಪಾಕಿಸ್ತಾನ ಸಂಸತ್ತು ಅನುಮೋದನೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News