ಆಯುಷ್ ವೈದ್ಯಾಧಿಕಾರಿಗಳಿಗೂ ವಿಶೇಷ ಭತ್ತೆ ನೀಡಲು ಆಗ್ರಹಿಸಿ ಮನವಿ

Update: 2021-06-16 05:42 GMT

ಮಂಗಳೂರು, ಜೂ.16: ಕೋವಿಡ್ ಸಾಂಕ್ರಾಮಿಕದ ಈ ಪರಿಸ್ಥಿತಿಯಲ್ಲಿ ಸರಕಾರವು ಅಲೋಪತಿ ಹಾಗೂ ಆಯುಷ್ ವೈದ್ಯರಿಂದ ಒಂದೇ ರೀತಿಯ ಕೋವಿಡ್ ಸೇವೆಗಳನ್ನು ಪಡೆದುಕೊಳ್ಳುತ್ತಿದೆ. ಆದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಿಗೆ ಮಾತ್ರ ಸರಕಾರ ವಿಶೇಷ ಭತ್ತೆ ನೀಡುವ ಆದೇಶ ಹೊರಡಿಸಿದೆ. ಇಲಾಖೆಯ ಎಲ್ಲಾ ಹಂತದಲ್ಲೂ ನಮ್ಮ ಸೇವೆ ಪಡೆಯುತ್ತಿದ್ದರೂ ವೇತನ - ಭತ್ತೆ - ಸ್ಥಾನಮಾನಗಳನ್ನು ನೀಡುವಾಗ ಮಾತ್ರ 'ಆಯುಷ್ ವೈದ್ಯಾಧಿಕಾರಿಗಳನ್ನು ಹೊರತುಪಡಿಸಿ' ಎಂದೂ ಆದೇಶ ನೀಡಿರುವುದು ವಿಷಾದನೀಯ. ಆದ್ದರಿಂದ ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಾಧಿಕಾರಿಗಳಿಗೂ ವಿಶೇಷ ಭತ್ತೆ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಆಯುಷ್ ವೈದ್ಯಾಧಿಕಾರಿಗಳ ಸಂಘದ ದ.ಕ. ಜಿಲ್ಲಾ ಘಟಕದಿಂದ ದ.ಕ. ಅಪರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಕೊರೋನ ಮಹಾಮಾರಿಯ ಸಂದರ್ಭದಲ್ಲಿಯೂ ನಮ್ಮ ಸೇವೆ ಹಿಂಜರಿಯದೆ ಪಡೆಯುತ್ತಿದ್ದರೂ ಮತ್ತು ಹಿಂದೆ ಸರಕಾರ ಸಚಿವ ಸಂಪುಟ ಸಭೆಯಲ್ಲಿ ಆಯುಷ್ ವೈದ್ಯಾಧಿಕಾರಿಗಳಿಗೆ ಸಮಾನ ಭತ್ತೆ ನೀಡುವ ಆದೇಶ ನೀಡಿದ್ದರೂ ಪ್ರಸಕ್ತ ಆದೇಶದಲ್ಲಿ ಮಾತ್ರ ಆಯುಷ್ ಇಲಾಖೆ ಸೇವೆಯಲ್ಲಿರುವವರನ್ನು 'ಹೊರತುಪಡಿಸಿ' ಎನ್ನುತ್ತಿರುವುದು ಖೇದನೀಯ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಸೈಯದ್ ಝಾಹಿದ್ ಹುಸೇನ್, ಕಾರ್ಯದರ್ಶಿ ಡಾ.ಸಹನಾ ಕೆ. ಹಾಗೂ ಸಂಘದ ಸದಸ್ಯ ಡಾ.ಅಜಿತನಾಥ್‌ ಇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News