ವಿದ್ಯುತ್ ದರ ಏರಿಕೆ: ಜನರ ಹಸಿವಿನ ಹೊಟ್ಟೆಗೆ ದೊಣ್ಣೆಯ ಹೊಡೆತ: ರಮಾನಾಥ ರೈ ಆಕ್ರೋಶ

Update: 2021-06-16 07:28 GMT

ಮಂಗಳೂರು, ಜೂ.16: ಕೊರೋನ ಲಾಕ್‌ಡೌನ್, ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಂದರ್ಭದಲ್ಲೇ ವಿದ್ಯುತ್ ಮೀಟರ್ ದರ ಏರಿಕೆಯ ಮೂಲಕ ಜನರ ಹಸಿವಿನ ಹೊಟ್ಟೆಗೆ ದೊಣ್ಣೆಯಿಂದ ಹೊಡೆದಂತಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ಅವಧಿಯಲ್ಲಿ ಕಾಂಗ್ರೆಸ್ ಸರಕಾರ ರೈತರ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದೆ. ಕೊರೋನ ಸಂಕಷ್ಟದ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಲಾಕ್‌ಡೌನ್ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಒಂದು ವರ್ಷದ ಅವಧಿಯಲ್ಲಿ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿದೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಆಡಳಿತದಲ್ಲಿ ವಿದ್ಯುತ್ ಕಂಪೆನಿಗಳು ಉತ್ತಮ ವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಸದ್ಯ ಕಂಪೆನಿಗಳು ನಷ್ಟದಲ್ಲಿದ್ದರೆ ಅದಕ್ಕೆ ಆ ಕಂಪೆನಿಗಳ ಅದಕ್ಷತೆ ಹಾಗೂ ಭ್ರಷ್ಟಾಚಾರವೇ ಕಾರಣ ಎಂದು ಅವರು ಹೇಳಿದರು.

ರಾಜ್ಯದಲ್ಲಿ ವಿದ್ಯುತ್ ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತದೆ. ಆದರೆ ಈ ನಡುವೆ ಅದಾನಿ ಕಂಪೆನಿ ಸೇರಿದಂತೆ ನಾನಾ ಕಂಪೆನಿಗಳಿಂದ ಸರಕಾರ ವಿದ್ಯುತ್ ಖರೀದಿಸುತ್ತಿದೆ. ಕಂಪೆನಿಗಳ ಅನುಕೂಲ ನೀತಿಯನ್ನು ಅನುಸರಿಸಿ ಜನರಿಗೆ ಸಂಕಷ್ಟ ಸಂದರ್ಭದಲ್ಲಿ ಹೊರೆ ನೀಡುತ್ತಿದೆ. ಸರಕಾರಕ್ಕೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವ ಇಲ್ಲ. ಬದಲಾಗಿ ವ್ಯಾಪಾರಿಗಳಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ರಮಾನಾಥ ರೈ ಆರೋಪಿಸಿದರು.

ಇಂಧನ ದರ ಏರಿಕೆಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಇಂತಹ ಸಂದರ್ಭದಲ್ಲಿ ಸಕಾರಣವಿಲ್ಲದೆ ವಿದ್ಯುತ್ ದರ ಏರಿಕೆಯನ್ನು ಕೈಬಿಡಬೇಕು ಎಂದು ಅವರು ಆಗ್ರಹಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಮೆಸ್ಕಾಂ, ಬೆಸ್ಕಾಂ ಹೊರತುಪಡಿಸಿ ಉಳಿದ ರಾಜ್ಯದ ವಿದ್ಯುತ್ ಸರಬರಾಜು ಕಂಪೆನಿಗಳು ನಷ್ಟದಲ್ಲಿರಲು ಅವುಗಳ ಅದಕ್ಷತೆಯೇ ಕಾರಣ. ಮೆಸ್ಕಾಂ ವ್ಯಾಪ್ತಿಯ ದ.ಕ. ಹಾಗೂ ಉಡುಪಿಯಲ್ಲಿ ಗ್ರಾಹಕರಿಂದ ಸಮರ್ಪಕವಾಗಿ ವಿದ್ಯುತ್ ದರ ಪಾವತಿಯಾಗುತ್ತದೆ. ಹಾಗಿದ್ದರೂ ನಷ್ಟದ ನೆಪವೊಡ್ಡಿ ದರ ಏರಿಕೆಯ ಮೂಲಕ ಹೊರೆ ಹೇರುವುದಕ್ಕೆ ಅರ್ಥವಿಲ್ಲ. ಇದಲ್ಲದೆ ಸೌರ ವಿದ್ಯುತ್ ಮೇಲಿನ ನೀತಿಯನ್ನು ಕೂಡಾ ಬದಲಾಯಿಸುವ ಮೂಲಕ ಲಕ್ಷಾಂತರ ರೂ. ಖರ್ಚು ಮಾಡಿ ಸೌರ ಶಕ್ತಿಯನ್ನು ಅಳವಡಿಸಿಕೊಂಡವರಿಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಅಬ್ದುಲ್ ರವೂಫ್, ಭಾಸ್ಕರ್ ಕೆ., ಅಶೋಕ್ ಡಿ.ಕೆ., ಸದಾಶಿವ ಉಳ್ಳಾಲ್, ಅಪ್ಪಿ, ನವೀನ್ ಡಿಸೋಜ, ಪ್ರತಿಭಾ ಕುಳಾಯಿ, ಶಬೀರ್ ಸಿದ್ಧಕಟ್ಟೆ, ಬೇಬಿ ಕುಂದರ್, ಸುರೇಂದ್ರ ಕಾಂಬ್ಳಿ, ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News