ಬಂಟ್ವಾಳ: 'ಇಂದಿರಾ ಕ್ಷೇಮ ನಿಧಿ'ಗೆ ತಾಪಂ ಸದಸ್ಯ ಕೆ. ಸಂಜೀವ ಪೂಜಾರಿಯಿಂದ 50 ಸಾವಿರ ರೂ. ದೇಣಿಗೆ

Update: 2021-06-16 12:39 GMT

ಬಂಟ್ವಾಳ, ಜೂ.16: ಪಾಣೆಮಂಗಳೂರು ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರೋನ ಸೋಂಕು ಪೀಡಿತ ಕುಟುಂಬಗಳಿಗೆ ಪಡಿತರ ಸಾಮಾಗ್ರಿಗಳ ಕಿಟ್ ನೀಡುವ ಇಂದಿರಾ ಕ್ಷೇಮ ನಿಧಿಗೆ ತಾಲೂಕು ಪಂಚಾಯತ್ ಸದಸ್ಯ ಕೆ.ಸಂಜೀವ ಪೂಜಾರಿ ಅವರು ವೈಯಕ್ತಿಕ ನೆಲೆಯಲ್ಲಿ 50 ಸಾವಿರ ರೂಪಾಯಿ ದೇಣಿಗೆ ನೀಡಿದರು. 

ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮೂಲಕ ಬುಧವಾರ ಅವರ ನಿವಾಸದಲ್ಲಿ ಹಸ್ತಾಂತರಿಸಿದರು.

ಈ ಸಂದರ್ಭ ರಮಾನಾಥ ರೈ ಮಾತನಾಡಿ, ಕೋವಿಡ್ ಎರಡನೇ ಅಲೆ ಜನರಿಗೆ ಸಾಕಷ್ಟು ಕಷ್ಟಗಳನ್ನು ತಂದೊಡ್ಡಿದೆ. ಕೋವಿಡ್ ನಿವಾರಣೆಗಾಗಿ ಕಾಂಗ್ರೆಸ್ ಪಕ್ಷವೂ ಸಾಕಷ್ಟು ಕೆಲಸಗಳನ್ನು ಮಾಡುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಕೊಡುವವನಲ್ಲೂ ಶಕ್ತಿ ಇಲ್ಲ. ಬಡವನಲ್ಲೂ ಶಕ್ತಿ ಇಲ್ಲ‌. ಇದನ್ನು ಮನಗಂಡು ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಜಂಟಿಯಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕೊರೋನ ಸೋಂಕಿತರಿಗೆ ಇಂದಿರಾ ಕ್ಷೇಮ ನಿಧಿಯ ಮೂಲಕ ಆಹಾರ ಸಾಮಾಗ್ರಿಗಳ ಕಿಟ್ ಕೊಡುವ ಕೆಲಸ ಮಾಡುತ್ತಿದೆ ಎಂದರು. 

ದಾನಿಗಳ ಸಹಕಾರದೊಂದಿಗೆ ಈ ಕೆಲಸ ಮಾಡುತ್ತಿದ್ದೇವೆ. ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,500 ಕೊರೋನ ಸೋಂಕಿತ ಮನೆಗಳಿದ್ದು ಎಲ್ಲಾ ಮನೆಗಳಿಗೂ ಕಿಟ್ ನೀಡಲಿದ್ದೇವೆ. ರಕ್ತದಾನ, ಹಸಿದವರಿಗೆ ಅನ್ನದಾನ, ಅಂಬ್ಯುಲೆನ್ಸ್ ಸೇವೆಯನ್ನು ನೀಡುವ ಮೂಲಕ ಜನರ ಸಮಸ್ಯೆಗೆ ನಾವು ಸ್ಪಂದಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ತಾಲೂಕು ಪಂಚಾಯತ್ ಸದಸ್ಯ ಕೆ. ಸಂಜೀವ ಪೂಜಾರಿ ಬೊಳ್ಳಾಯಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರಾದ  ಜಯಶಂಕರ್ ಕಾನ್ಸಲೆ, ಇಕ್ಬಾಲ್ ನಂದಾವರ, ಕಾರ್ತಿಕ್ ಕೋಮಾಲಿ, ಅಶೋಕ್ ಕೋಮಾಲಿ, ರೋಹಿತ್ ಪಟ್ಟುಗುಡ್ಡೆ, ವಿನೋದ್ ಕೋಮಾಲಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News