ಉಡುಪಿ ಜಿಲ್ಲೆಯಲ್ಲಿ ಬುಧವಾರ 159 ಮಂದಿಗೆ ಸೋಂಕು ದೃಢ; 372 ಮಂದಿ ಗುಣಮುಖ

Update: 2021-06-16 14:20 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.16: ಬುಧವಾರ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಬಂದವರ ಸಂಖ್ಯೆ 159 ಆಗಿದೆ. ದಿನದಲ್ಲಿ ಕೋವಿಡ್‌ನಿಂದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. 372 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದು, ಸದ್ಯ 2468 ಸಕ್ರಿಯ ಪ್ರಕರಣ ಜಿಲ್ಲೆಯಲ್ಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು ಮೃತಪಟ್ಟವರು ಉಡುಪಿಯ 75ರ ಹರೆಯದ ಹಾಗೂ ಕಾರ್ಕಳದ 89 ವರ್ಷ ಪ್ರಾಯದ ವೃದ್ಧ ಮಹಿಳೆಯರು. ಇವರು ಕೋವಿಡ್ ಗುಣಲಕ್ಷಣದೊಂದಿಗೆ ತೀವ್ರವಾದ ಉಸಿರಾಟ ತೊಂದರೆ ಹಾಗೂ ನ್ಯುಮೋನಿಯಾಕ್ಕಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 365ಕ್ಕೇರಿದೆ.

ಇಂದು ಪಾಸಿಟಿವ್ ಬಂದ 159 ಮಂದಿಯಲ್ಲಿ 78 ಮಂದಿ ಪುರುಷರು ಹಾಗೂ 81 ಮಂದಿ ಮಹಿಳೆಯರು. ಇವರಲ್ಲಿ ಉಡುಪಿ ತಾಲೂಕಿನ 58, ಕುಂದಾಪುರ ತಾಲೂಕಿನ 47 ಹಾಗೂ ಕಾರ್ಕಳ ತಾಲೂಕಿನ 50 ಮಂದಿ ಇದ್ದು, ಉಳಿದ ನಾಲ್ವರು ಹೊರಜಿಲ್ಲೆಯವರು. ಇವರಲ್ಲಿ 22 ಮಂದಿ ಕೋವಿಡ್ ಆಸ್ಪತ್ರೆ ಹಾಗೂ 137 ಮಂದಿ ಹೋಮ್ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ನಿನ್ನೆ ಒಟ್ಟು 372 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 61,833ಕ್ಕೇರಿದೆ. ಮಂಗಳವಾರ ಜಿಲ್ಲೆಯಲ್ಲಿ 3358 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಂಡಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 64,666 ಆಗಿದೆ ಎಂದು ಡಾ.ಉಡುಪ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 6,43,036 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಬುಧವಾರ ಜಿಲ್ಲೆಯಲ್ಲಿ ಕಪ್ಪು ಶಿಲೀಂದ್ರ ಸೋಂಕಿನ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ. ಈಗಲೂ ಏಳು ಮಂದಿ ಮಣಿಪಾಲ ಕೆಎಂಸಿ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

10,001 ಮಂದಿ ಲಸಿಕೆ ಸ್ವೀಕಾರ
ಜಿಲ್ಲೆಯಲ್ಲಿ ಬುಧವಾರ ಒಟ್ಟು 10,001 ಮಂದಿ ಕೋವಿಡ್ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಇವರಲ್ಲಿ 8986 ಮಂದಿ ಲಸಿಕೆಯ ಮೊದಲ ಡೋಸ್ ಸ್ವೀಕರಿಸಿದರೆ, 1015 ಮಂದಿ ಎರಡನೇ ಡೋಸ್ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಇಂದು 18ರಿಂದ 44 ವರ್ಷದೊಳಗಿನ 5584 ಮಂದಿ ಮೊದಲ ಡೋಸ್‌ನ್ನು ಪಡೆದಿದ್ದಾರೆ. 45 ವರ್ಷ ಮೇಲಿನ 3266 ಮಂದಿ ಮೊದಲ ಡೋಸ್ ಹಾಗೂ 980 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 73 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 98 ಮಂದಿ ಮುಂಚೂಣಿ ಕಾರ್ಯಕರ್ತರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ 3,25,471 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 93,464 ಮಂದಿ ಎರಡನೇ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದು ಡಾ.ಉಡುಪ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News