ಉಡುಪಿ: ಎಸ್‌ಸಿಡಿಸಿಸಿಯಿಂದ ಪತ್ರಕರ್ತರಿಗೆ ಕಿಟ್ ವಿತರಣೆ

Update: 2021-06-16 14:23 GMT

ಉಡುಪಿ, ಜೂ.16: ಕೊರೋನಾ ಸೋಂಕು ವ್ಯಾಪಕವಾಗಿರುವ ಇಂದಿನ ಸಂದರ್ಭದಲ್ಲೂ ಜನರನ್ನು ಎಚ್ಚರಿಸುತ್ತಾ ಹಗಲಿರುಳು ಶ್ರಮಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ ಎಂದು ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರದ ಪಡಿತರ ಕಿಟ್‌ಗಳನ್ನು ಸಂಘದ ಕಚೇರಿಯಲ್ಲಿ ಬುಧವಾರ ವಿತರಿಸಿ ಅವರು ಮಾತನಾಡುತಿದ್ದರು.

ಕೊರೋನದಿಂದ ಜನರು ಭಯಭೀತರಾಗಿದ್ದಾರೆ. ಇದರ ವಿರುದ್ದ ಹೋರಾಟ ನಡೆಸುವುದೇ ಸಾಹಸ. ಇಂಥ ಸಮಯಲ್ಲಿ ಜನರನ್ನು ಕೊರೋನದ ಬಗ್ಗೆ ಎಚ್ಚರ ದಿಂದ ಇರುವಂತೆ ಪತ್ರಕರ್ತರು ಸಾಕಷ್ಟು ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.

ಕೊರೋನಾ ಸಂಕಷ್ಟ ಕಾಲದಲ್ಲಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಹಲವು ಮಹತ್ತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಜಿಲ್ಲಾಡಳಿತ, ಆರೋಗ್ಯ ಇಲಾಖೆಗೂ ಬ್ಯಾಂಕ್ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.

ರಾಜ್ಯ ಮಹಾಮಂಡಲದ ನಿರ್ದೇಶಕ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕೊರೋನಾ ಪ್ರಥಮ ಅಲೆ ಬಂದಾಗಲೂ ಸಹಕಾರ ಕ್ಷೇತ್ರ ಉತ್ತಮವಾಗಿ ಸ್ಪಂದಿಸಿದೆ. 2ರಿಂದ 3 ಕೋ.ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ. ಅವಿಭಜಿತ ದ.ಕ.ಜಿಲ್ಲೆಯ ಹಲವೆಡೆ ಅಗತ್ಯ ವಸ್ತುಗಳನ್ನು ಸರಬರಾಜು ಮಾಡಲಾಗಿದೆ. ಸಹಕಾರ ಸಂಸ್ಥೆಯ ಸಿಬಂದಿಗಳೂ ಉತ್ತಮವಾಗಿ ಶ್ರಮಿಸಿದ್ದಾರೆ. ಅವರನ್ನೂ ಫ್ರಂಟ್‌ಲೈನ್ ವಾರಿಯರ್ ಆಗಿ ಘೋಷಿಸಬೇಕು ಎಂದವರು ಒತ್ತಾಯಿಸಿದರು.

ಬ್ಯಾಂಕಿನ ನಿರ್ದೇಶಕರಾದ ರಾಜೇಶ್ ರಾವ್ ಪಾಂಗಾಳ, ಅಶೋಕ್ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾರ್ಯದರ್ಶಿ ನಝೀರ್ ಪೊಲ್ಯ ಉಪಸ್ಥಿತರಿದ್ದರು. ಪತ್ರಕರ್ತರ ಸಂಘದ ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ವಂದಿಸಿದರು. ಪತ್ರಕರ್ತ ದೀಪಕ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News