ಮನಪಾ ಅಧಿಕಾರಿಗಳ ಸೋಗಿನಲ್ಲಿ ಹಣ ವಸೂಲಿಗೆ ಯತ್ನ: ಬಟ್ಟೆ ಅಂಗಡಿ ಮಾಲಕನಿಂದ ದೂರು

Update: 2021-06-16 16:15 GMT

ಮಂಗಳೂರು, ಜೂ. 16: ನಗರದ ಟೋಕಿಯೋ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಮಹಾನಗರ ಪಾಲಿಕೆಯ ಅಧಿಕಾರಿಗಳೆಂದು ಹೇಳಿಕೊಂಡು ಬಂದ ಮೂವರು ಹಣ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ್ದಾರೆ ಎಂದು ಆರೋಪಿಸಿ ನಗರದ ಬಂದರು ಠಾಣೆಯಲ್ಲಿ ದೂರು ದಾಖಲಾಗಿದೆ.

ಟೋಕಿಯೊ ಮಾರ್ಕೆಟ್‌ನಲ್ಲಿರುವ ಬಟ್ಟೆ ಅಂಗಡಿಯೊಂದಕ್ಕೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಭೇಟಿ ನೀಡಿದ ಮೂವರು, ತಾವು ಪಾಲಿಕೆ ಅಧಿಕಾರಿಗಳೆಂದು ಪರಿಚಯಿಸಿಕೊಂಡು ಲಾಕ್‌ಡೌನ್ ವೇಳೆ ಅಂಗಡಿ ತೆರೆದಿರುವುದಕ್ಕೆ 50,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ತಾನು ಒಪ್ಪದಿದ್ದಾಗ ಎಲ್ಲ ಸರಿ ಮಾಡುವುದಾಗಿ ಹೇಳಿ 10,000 ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಬಳಿಕ ಸುತ್ತಮುತ್ತಲಿದ್ದ ಕೆಲವರು ಸಹಾಯಕ್ಕೆ ಆಗಮಿಸಿ ಅವರು ಮನಪಾ ಅಧಿಕಾರಿಗಳು ಅಲ್ಲವೆಂದು ಖಚಿತಪಡಿಸಿದ್ದಾರೆ. ಈ ರೀತಿ ಅಧಿಕಾರಿಗಳ ಸೋಗಿನಲ್ಲಿ ಬಂದ ಮಂಗಳೂರಿನ ದೀಪಕ್ ರಾಜೇಶ್ ಕುವೆಲ್ಲೋ, ತೌಸೀಫ್ ಖಲಂದರ್ ಮತ್ತು ರಿಯಾಝ್ ಎಂಬವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಂಗಡಿ ಮಾಲಕ ಅಬ್ದುಲ್ ರಹಿಮಾನ್ ಎಂಬವರು ಬಂದರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿ ತೆರೆಯಲು ಅವಕಾಶವಿಲ್ಲ. ಹಾಗಾಗಿ  ಬೆಳಗ್ಗಿನ ಕರ್ಫ್ಯೂ ಸಡಿಲಿಕೆ ಅವಧಿಯಲ್ಲಿ ಕೆಲಸದವರಿಗೆ ವೇತನವನ್ನು ಬ್ಯಾಂಕ್ ಅಕೌಂಟಿಗೆ ಹಾಕುವ ಉದ್ದೇಶದಿಂದ ತಾನು ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆದಿದ್ದಾಗಿ ದೂರಿನಲ್ಲಿ ಅಬ್ದುಲ್ ರಹಿಮಾನ್ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News