ಮಾನವಸಹಿತ ರಾಕೆಟ್‌ ಅನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಉಡಾಯಿಸಿದ ಚೀನಾ

Update: 2021-06-17 08:59 GMT
Photo: PTI

ಜಿಕ್ಯುಯಾನ್, ಚೀನಾ: ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣಕ್ಕೆ ಮೊಟ್ಟಮೊದಲ ಬಾರಿ ಬಾಹ್ಯಾಕಾಶಯಾನಿಗಳನ್ನು ಒಯ್ಯುತ್ತಿದ್ದ ರಾಕೆಟ್ ಗುರುವಾರ ಮುಂಜಾನೆ ಉಡಾವಣೆಗೊಂಡಿದೆ. ಇದು ಬಾಹ್ಯಾಕಾಶ ಯಾನಿಗಳನ್ನು ಕರೆದೊಯ್ಯುವ ಮಹತ್ವಾಕಾಂಕ್ಷಿ ಮಿಷನ್ ಆಗಿದೆ. ಚೀನಾ ಈ ಮಿಷನ್ ಮೂಲಕ ವಿಶ್ವದ ಪ್ರಬಲ ಬಾಹ್ಯಾಕಾಶ ಶಕ್ತಿಯಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ತಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಹೊರಟಿದ್ದ ಲಾಂಗ್ ಮಾರ್ಚ್-2ಎಫ್ ರಾಕೆಟ್ ಉಡ್ಡಯಣಗೊಂಡಿದೆ ಎಂದು ಸರ್ಕಾರಿ ಟಿವಿ ವರದಿ ಮಾಡಿದೆ. ಇದರಲ್ಲಿ ಬಾಹ್ಯಾಕಾಶ ಯಾನಿಗಳು ಮೂರು ತಿಂಗಳು ಕಳೆಯಲಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 9.22ಕ್ಕೆ ರಾಕೆಟನ್ನು ಈಶಾನ್ಯ ಚೀನಾದ ಗೋಬಿ ಮರುಭೂಮಿಯ ಜಿಕ್ಯುಯಾನ್ ಉಡಾವಣಾ ಕೇಂದ್ರದಿಂದ ಉಡಾಯಿಸಲಾಗಿದೆ. ನೀಲಿ ಆಕಾಶದಲ್ಲಿ ಹೊಗೆಯ ಕಾರ್ಮೋಡವನ್ನು ಸೃಷ್ಟಿಸಿ ರಾಕೆಟ್ ನಭಕ್ಕೆ ಚಿಮ್ಮಿತು.

ಉಡ್ಡಯಣಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಸ್ಪೇಸ್ ಸೂಟ್ ಧರಿಸಿದ್ದ ಮೂವರು ಬಾಹ್ಯಾಕಾಶ ಯಾನಿಗಳು ತಮ್ಮ ಕುಟುಂಬ ಸದಸ್ಯರು ಮತ್ತು ಸಿಬ್ಬಂದಿ ಸೇರಿದಂತೆ ನೆರೆದಿದ್ದ ಬೆಂಬಲಿಗರಿಗೆ ಶುಭಾಶಯ ಕೋರಿದರು. ಈ ಸಮಾರಂಭದಲ್ಲಿ ಸೇರಿದ್ದ ಬೆಂಬಲಿಗರು ಚೀನಾದ ದೇಶಭಕ್ತಿ ಗೀತೆ, "ಚೀನಾದ ಕಮ್ಯುನಿಸ್ಟ್ ಪಾರ್ಟಿ ಇಲ್ಲದೇ, ಹೊಸ ಚೀನಾ ಇಲ್ಲ" ಎಂದು ಹಾಡಿ ಚೀನೀ ಧ್ವಜ ಬೀಸಿದರು.

ಉಡಾವಣೆಗಿಂತ ಮುನ್ನ ಸರ್ಕಾರಿ ಸ್ವಾಮ್ಯದ ಸಿಸಿಟಿವಿ ಉಡಾವಣಾ ಸಿದ್ಧತೆಯ ನೇರಪ್ರಸಾರ ಮಾಡಿತ್ತು. ಇದು ಐದು ವರ್ಷಗಳಲ್ಲಿ ಚೀನಾದ ಮೊಟ್ಟಮೊದಲ ಮಾನವಸಹಿತ ಬಾಹ್ಯಾಕಾಶ ನೌಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News