ಆಯಿಶಾ ಸುಲ್ತಾನ ವಿರುದ್ಧ ದೇಶದ್ರೋಹ ಪ್ರಕರಣ: ನಿರೀಕ್ಷಣಾ ಜಾಮೀನು ಅರ್ಜಿಗೆ ಲಕ್ಷದ್ವೀಪ ಆಡಳಿತದ ವಿರೋಧ
ಹೊಸದಿಲ್ಲಿ: ದೇಶದ್ರೋಹದ ಆರೋಪದ ಮೇಲೆ ತಮ್ಮ ವಿರುದ್ಧ ಎಫ್‍ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಲಕ್ಷದ್ವೀಪ ಮೂಲದ ಚಿತ್ರ ತಯಾರಕಿ ಆಯಿಶಾ ಸುಲ್ತಾನ ಅವರು ಕೇರಳ ಹೈಕೋರ್ಟ್ ಗೆ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಲಕ್ಷದ್ವೀಪ ಆಡಳಿತ ವಿರೋಧಿಸಿದೆ.
ಆಕೆಯನ್ನು ಬಂಧಿಸಲಾಗುವುದು ಎಂದು ನಂಬಲು ಯಾವುದೇ ನಿಖರ ಕಾರಣವನ್ನು ಆಕೆ ತಮ್ಮ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿಲ್ಲದೇ ಇರುವುದರಿಂದ ಆಕೆಯ ನಿರೀಕ್ಷಣಾ ಜಾಮೀನು ಅರ್ಜಿ ಸಮಥನೀಯವಾಗುವುದಿಲ್ಲ ಎಂದು ಲಕ್ಷದ್ವೀಪದ ಆಡಳಿತ ಹೇಳಿದೆ.
ಆಕೆಯ ನಿರೀಕ್ಷಣಾ ಜಾಮೀನು ಅರ್ಜಿ ಇಂದು ಕೇರಳ ಹೈಕೋರ್ಟ್ ನಲ್ಲಿ ವಿಚಾರಣೆಗೆ ಬರಲಿದೆ.
ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು "ಕೇಂದ್ರ ನಿಯೋಜಿಸಿದ ಜೈವಿಕ ಅಸ್ತ್ರ" ಎಂದು ಆಕೆ ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಬಿಜೆಪಿಯ ಲಕ್ಷದ್ವೀಪ ಘಟಕದ ಅಧ್ಯಕ್ಷ ಸಿ ಅಬ್ದುಲ್ ಖಾದರ್ ಹಾಜಿ ಅವರು ಸಲ್ಲಿಸಿದ್ದ ಅಪೀಲಿನ ಮೇರೆಗೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮಲಯಾಳಂ ಟಿವಿ ವಾಹಿನಿಯೊಂದು ನಡೆಸಿದ ಚರ್ಚಾ ಕಾರ್ಯಕ್ರಮದಲ್ಲಿ ಆಯಿಶಾ ಸುಲ್ತಾನ ಮೇಲಿನ ಹೇಳಿಕೆ ನೀಡಿದ್ದರು.