ಮನಪಾ ಅಧಿಕಾರಿಗಳ ಸೋಗಿನಲ್ಲಿ ಸುಲಿಗೆ ಯತ್ನ ಪ್ರಕರಣ; ಓರ್ವ ಸೆರೆ: ಕಮಿಷನರ್ ಶಶಿಕುಮಾರ್

Update: 2021-06-17 12:25 GMT
ಕಮಿಷನರ್ ಶಶಿಕುಮಾರ್

ಮಂಗಳೂರು, ಜೂ. 17: ನಗರದ ಟೋಕಿಯೋ ಮಾರ್ಕೆಟ್‌ನ ಬಟ್ಟೆ ಅಂಗಡಿಯೊಂದರಲ್ಲಿ ಮನಪಾ ಅಧಿಕಾರಿಗಳ ಸೋಗಿನಲ್ಲಿ ಸುಲಿಗೆ ಮಾಡಲೆತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮಹಾಗನರ ಪಾಲಿಕೆ ಅಧಿಕಾರಿಗಳೆಂದು ಹೇಳಿಕೊಂಡು ಲಾಕ್‌ಡೌನ್ ಕಾರಣದಿಂದ ಬಟ್ಟೆಯಂಗಡಿ ತೆರೆಯಲು ಅವಕಾಶವಿಲ್ಲದೆಂದು ಹೇಳಿಕೊಂಡು ವೀಡಿಯೋ ಹಾಗೂ ಫೋಟೋ ತೆಗೆಯಲು ಯತ್ನಿಸಿದ್ದು, ಅದನ್ನು ಮಾಲಕ ವಿರೋಧಿಸಿದಾಗ ಪ್ರಕರಣ ದಾಖಲಿಸುವುದನ್ನು ತಪ್ಪಿಸಬೇಕಾದರೆ 50,000 ರೂ. ನೀಡುವಂತೆ ಒತ್ತಾಯಿಸಿದ ಆರೋಪಿಗಳು ಬಳಿಕ 10,000 ರೂ. ಆದರೂ ನೀಡುವಂತೆ ಹಾಗೂ ಇಲ್ಲವಾದಲ್ಲಿ ಪಾಲಿಕೆ ಅಧಿಕಾರಿಗಳಿಗೆ ತಿಳಿಸಿ ಪೊಲೀಸರಿಗೆ ದೂರು ನೀಡಿ ಅಂಗಡಿ ಲಾಕ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ದೂರಲಾಗಿತ್ತು.

ಪ್ರಕರಣವನ್ನು ಪರಿಶೀಲಿಸಿದಾಗ ಆ ವ್ಯಕ್ತಿಗಳು ಅಧಿಕಾರಿಗಳಲ್ಲ ಎಂದು ತಿಳಿದುಬಂದಿದ್ದು, ಅವರ ಮೇಲೆ ಸುಲಿಗೆ ಪ್ರಕರಣವನ್ನು ದಾಖಲಿಸಲಾಗಿದೆ. ಓರ್ವನನ್ನು ಬಂಧಿಸಲಾಗಿದ್ದು, ಇತರ ಇಬ್ಬರನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ದೂರುದಾರರು ಕೂಡಾ ಕೊರೋನ ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಅಂಗಡಿ ತೆರೆದಿದ್ದ ಕಾರಣ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News