ಮರಡೋನರನ್ನು ವೈದ್ಯರೇ ಕೊಂದರು: ಪ್ರಕರಣದಲ್ಲಿ ಆರೋಪಿಯಾಗಿರುವ ನರ್ಸ್ ನ ವಕೀಲ

Update: 2021-06-17 13:45 GMT
ಡೀಗೊ ಮರಡೋನ
photo -twitter 

ಸಾನ್ ಇಸಿಡ್ರೊ (ಅರ್ಜೆಂಟೀನ), ಜೂ. 17: ಅರ್ಜೆಂಟೀನದ ಫುಟ್ಬಾಲ್ ದಂತಕತೆ ಡೀಗೊ ಮರಡೋನರನ್ನು ನಿರ್ಲಕ್ಷ್ಯ ವಹಿಸುವ ಮೂಲಕ ವೈದ್ಯರೇ ಕೊಂದರು ಎಂದು ಅವರು ಚಿಕಿತ್ಸೆ ಪಡೆದ ಆಸ್ಪತ್ರೆಯ ನರ್ಸ್ ಒಬ್ಬರ ವಕೀಲರು ಬುಧವಾರ ಆರೋಪಿಸಿದ್ದಾರೆ.

ತನ್ನ ಕಕ್ಷಿದಾರನಾಗಿರುವ ನರ್ಸ್ ಡಹಿಯಾನ ಜಿಸೇಲಾ ಮ್ಯಾಡ್ರಿಡ್ ರನ್ನು ಪ್ರಾಸಿಕ್ಯೂಟರ್‌ ಗಳು ವಿಚಾರಣೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ರುಡೊಲ್ಫೊ ಬಕ್, ‘‘ಅವರು (ವೈದ್ಯರು) ಡೀಗೊರನ್ನು ಕೊಂದರು’’ ಎಂದು ಹೇಳಿದರು.

ಮರಡೋನ ಕಳೆದ ವರ್ಷದ ನವೆಂಬರ್ ನಲ್ಲಿ ತನ್ನ 60ರ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅದಕ್ಕೂ ಕೆಲವು ವಾರಗಳ ಮೊದಲು ಅವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು.
ಮರಡೋನರ ಸಾವಿನ ಬಗ್ಗೆ ತನಿಖೆ ನಡೆಸಿದ ತಜ್ಞರ ಸಮಿತಿಯೊಂದು, ಅವರಿಗೆ ಸರಿಯಾದ ಆರೈಕೆ ಸಿಕ್ಕಿರಲಿಲ್ಲ ಎಂದು ಹೇಳಿತ್ತು. ಅವರನ್ನು ಸುದೀರ್ಘ ಅವಧಿಗೆ ಅವರಷ್ಟಕ್ಕೆ ಬಿಟ್ಟುಬಿಡಲಾಗಿತ್ತು ಎಂದು ಅದು ಹೇಳಿತ್ತು.

ತಜ್ಞರ ಸಮಿತಿಯ ಹೇಳಿಕೆಯ ಬಳಿಕ, ಮಾನವಹತ್ಯೆಗಾಗಿ 36 ವರ್ಷದ ಮ್ಯಾಡ್ರಿಡ್ ಸೇರಿದಂತೆ ಏಳು ಮಂದಿಯನ್ನು ವಿಚಾರಣೆಗೆ ಗುರಿಪಡಿಸಲಾಗಿದೆ. ‘‘ಮರಡೋನರ ಸಾವಿಗೆ ದೂಷಿಸಬೇಕಾಗಿರುವುದು ಅವರಿಗೆ ಚಿಕಿತ್ಸೆ ನೀಡಿರುವ ವೈದ್ಯರನ್ನೇ ಹೊರತು ನನ್ನ ಕಕ್ಷಿಗಾರನನ್ನಲ್ಲ. ಮೆದುಳಿನ ಶಸ್ತ್ರಚಿಕಿತ್ಸೆಯಿಂದ ಚೇತರಿಸುತ್ತಿರುವಾಗ ಮರಡೋನರಿಗೆ ವೈದ್ಯರು ಸರಿಯಾದ ಚಿಕಿತ್ಸೆಯನ್ನು ನೀಡಿರಲಿಲ್ಲ’’ ಎಂದು ವಕೀಲ ಬಕ್ ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News