×
Ad

ಡಿ.ಎಸ್.ರಾಮಸ್ವಾಮಿಗೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ

Update: 2021-06-17 19:42 IST

ಉಡುಪಿ, ಜೂ.17: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಆಡಳಿತದ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಪ್ರತಿವರ್ಷ ನೀಡುವ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ-2021 ಅರಸಿಕೆರೆ ಲೇಖಕ ಡಿ.ಎಸ್.ರಾಮಸ್ವಾಮಿ ಅವರಿಗೆ ಲಭಿಸಿದೆ. ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.

ಪ್ರಶಸ್ತಿಯ ಆಯ್ಕೆ ಸಮಿತಿ ಡಿ.ಎಸ್.ರಾಮಸ್ವಾಮಿ ಅವರ ‘ಮೀನು ಬೇಟೆಗೆ ನಿಂತ ದೋಣಿ ಸಾಲು’ ಅಪ್ರಕಟಿತ ಕವನ ಸಂಕಲನವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.ಕವಿ, ಕಾದಂಬರಿಕಾರ, ನಾಟಕಕಾರ, ಕಥೆಗಾರ, ಪತ್ರಿಕೋದ್ಯಮಿ ಹೀಗೆ ಕನ್ನಡ ಸಾರಸ್ವತ ಲೋಕದಲ್ಲಿ ಜನಪ್ರಿಯರಾದ ಕಡೆಂಗೋಡ್ಲು ಶಂಕರ ಭಟ್ಟರ ಹೆಸರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.ಎಸ್.ರಾಮಸ್ವಾಮಿ ಅವರು ತರೀಕೆರೆ ಮೂಲದವರಾಗಿದ್ದು, ಪ್ರಸ್ತುತ ಅರಸೀಕೆರೆ ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆ, ಕನ್ನಡಪ್ರಭಾ ಪತ್ರಿಕೆಯ ಸಂಕ್ರಾಂತಿ ಕಥಾ ಸ್ಪರ್ಧೆ, ಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ಧೆ ಇತ್ಯಾದಿ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಹಾಸನ, ಭದ್ರಾವತಿ ಮತ್ತು ಮೈಸೂರು ಆಕಾಶ ವಾಣಿ ಗಳಿಂದ ಇವರ 150ಕ್ಕೂ ಹೆಚ್ಚು ಚಿಂತನೆಗಳು ಪ್ರಸಾರವಾಗಿವೆ.

ಉಡುಪಿಯ ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೂಡಬಿದಿರೆ ಆಳ್ವಾಸ್ ನುಡಿಸಿರಿಯಲ್ಲಿ ಕತೆಗಳನ್ನು ಪ್ರಸ್ತುತಪಡಿಸಿದ್ದಾರೆ. ‘ಅಂಡಮಾನ್’ ಕುರಿತ ಇವರ ಪ್ರವಾಸ ಕಥನ ಧಾರವಾಹಿಯಾಗಿ ಪ್ರಸಾರಗೊಂಡಿತ್ತು. ಇವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಡಿ.ಸಿ.ಅನಂತಸ್ವಾಮಿ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್. ಶಿವರುದ್ರಪ್ಪ ಕಾವ್ಯ ಪ್ರಶಸ್ತಿ, ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯ ಪ್ರಶಸ್ತಿ ಹಾಗೂ ವಿಭಾ ಕಾವ್ಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News