ಗಣರಾಜ್ಯೋತ್ಸವ ದಿನದ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧು ವಿರುದ್ಧ ಆರೋಪಪಟ್ಟಿ ದಾಖಲು

Update: 2021-06-17 14:29 GMT

ಹೊಸದಿಲ್ಲಿ, ಜೂ.17: ಗಣರಾಜ್ಯೋತ್ಸವ ದಿನದಂದು ದಿಲ್ಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ನಟ-ಕಾರ್ಯಕರ್ತ ದೀಪ್ ಸಿಧು ವಿರುದ್ಧ ದಿಲ್ಲಿ ಪೊಲೀಸರು ಗುರುವಾರ ನ್ಯಾಯಾಲಯಕ್ಕೆ ಪೂರಕ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ತೀವ್ರವಾಗಿ ಗಾಯಗೊಂಡ ಸಾಕ್ಷಿಗಳು ಅಥವಾ ಯಾರಿಂದ ಆಯುಧಗಳನ್ನು ಕಸಿದುಕೊಳ್ಳಲಾಗಿದೆಯೋ ಅವರ ಹೆಸರನ್ನು ತನಿಖಾಧಿಕಾರಿ ಉಲ್ಲೇಖಿಸಿದ್ದಾರೆ. 

ಈ ಆರೋಪಪಟ್ಟಿಯ ಅಂಶಗಳನ್ನು ಪರಿಗಣಿಸಿದ ಬಳಿಕ ಜೂನ್ 19ರಂದು ಆದೇಶ ಹೊರಡಿಸಲಾಗುವುದು ಎಂದು ಚೀಪ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಗಜೇಂದ್ರ ಸಿಂಗ್ ನಗರ್ ಹೇಳಿದ್ದಾರೆ. ಪ್ರತಿಭಟನಾ ನಿರತ ರೈತರು ಜನವರಿ 26ರಂದು ದಿಲ್ಲಿಗೆ ಟ್ರ್ಯಾಕ್ಟರ್ ರ್ಯಾಲಿ ಆಯೋಜಿಸಿದ್ದರು. 

ಈ ಸಂದರ್ಭ ಪೊಲೀಸರೊಂದಿಗೆ ಘರ್ಷಣೆಗಿಳಿದ ರೈತರು ಬ್ಯಾರಿಕೇಡ್ ಗಳನ್ನು ಬದಿಗೊತ್ತಿ ಬಲಾತ್ಕಾರದಿಂದ ಕೆಂಪುಕೋಟೆಯನ್ನು ಪ್ರವೇಶಿಸಿದ್ದರು. ಘರ್ಷಣೆಯಲ್ಲಿ ಹಲವು ಪೊಲೀಸರು ಗಾಯಗೊಂಡಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಕ್ರೈಂಬ್ರಾಂಚ್ ಪೊಲೀಸರು 3,224 ಪುಟಗಳ ಆರೋಪಪಟ್ಟಿ ದಾಖಲಿಸಿದ್ದು ಇದರಲ್ಲಿ ಸಿಧು ಸಹಿತ 16 ಆರೋಪಿಗಳ ವಿರುದ್ಧ ಕ್ರಮಕ್ಕೆ ಉಲ್ಲೇಖಿಸಲಾಗಿದೆ. ಹಿಂಸಾಚಾರದ ಪ್ರಮುಖ ಪಿತೂರಿಗಾರ ಎಂದು ಆರೋಪಿಸಲಾಗಿದ್ದ ದೀಪ್ ಸಿಧುವನ್ನು ಫೆ.9ರಂದು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News