ದ.ಕ. ಜಿಲ್ಲೆಯಲ್ಲಿ ಜೂ.18ರಂದು ಆರೆಂಜ್ ಅಲರ್ಟ್ : ಹವಾಮಾನ ಇಲಾಖೆ

Update: 2021-06-17 16:16 GMT

ಮಂಗಳೂರು, ಜೂ.17: ಕಳೆದ ಮೂರ್ನಾಲ್ಕು ದಿನದಿಂದ ಸತತವಾಗಿ ಸುರಿಯುತ್ತಿದ್ದ ಮುಂಗಾರು ಮಳೆ ಗುರುವಾರ ಬಿರುಸು ಕಳಕೊಂಡಿದೆ. ಆಗಾಗ ಬಿರುಗಾಳಿ ಸಹಿತ ಮಳೆ ಸುರಿದರೆ, ದಿನದ ಬಹುತೇಕ ಹೊತ್ತು ಬಿಸಿಲು ಕಾಣಿಸಿಕೊಂಡಿತ್ತು. ಆದರೆ ಘಟ್ಟದ ತಪ್ಪಲು ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದ ಕಾರಣ ನದಿ ನೀರು ತುಂಬಿ ಹರಿಯುತ್ತಿದೆ. ಮಧ್ಯಾಹ್ನದ ವೇಳೆ ಒಣ ಬಿಸಿಲು ಇದ್ದರೂ ಸಂಜೆಯ ವೇಳೆಗೆ ಮೋಡ ಕವಿದ ವಾತಾವರಣವಿತ್ತು.

ಗುರುವಾರ ಸಾಧಾರಣ ಮಳೆ ಸುರಿದರೂ ಅಬ್ಬರದ ಗಾಳಿ ಬೀಸಿದೆ. ಬುಧವಾರ ರಾತ್ರಿಯಿಂದ ಗುರುವಾರ ಮುಂಜಾನೆಯರೆಗೆ ಸುರಿದ ಧಾರಾಕಾರ ಮಳೆ ಮತ್ತು ಬಿರುಗಾಳಿಗೆ ಜಿಲ್ಲೆಯ ಹಲವು ಕಡೆ ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯ ಮಲವಂತಿಗೆ, ನಾರಾವಿ, ಕೊಕ್ಕಡ, ಮಡಂತ್ಯಾರು, ನೂಜಿಬಾಳ್ತಿಲ, ಅರಸಿನಮಕ್ಕಿ ಮತ್ತಿತರ ಕಡೆ ಮಳೆ ಹೆಚ್ಚಾಗಿತ್ತು.

ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಶನಿವಾರ ಮತ್ತು ರವಿವಾರವೂ ಆರೆಂಜ್ ಅಲರ್ಟ್ ಇದೆ. ಕರ್ನಾಟಕ ಕರಾವಳಿ ತೀರದಲ್ಲಿ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ. ಅಲ್ಲದೆ ಸಮುದ್ರವೂ ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಸಂಜೆಯಿಂದ ಗುರುವಾರ ಸಂಜೆಯ ಅವಧಿಯಲ್ಲಿ 2 ಸಂಪೂರ್ಣ ಮತ್ತು 7 ಭಾಗಶಃ ಸಹಿತ 9 ಮನೆಗಳಿಗೆ ಹಾನಿಯಾಗಿದೆ.

ಕರ್ನಾಟಕ ಕರಾವಳಿಗೆ ಹೊಂದಿಕೊಂಡಂತೆ ಪೂರ್ವ ಅರಬ್ಬಿ ಸಮುದ್ರದಲ್ಲಿ ಗಾಳಿಯ ಒತ್ತಡದ ಕಂದಕ ಪ್ರದೇಶ ನಿರ್ಮಾಣವಾಗಿದೆ. ಹಾಗಾಗಿ ಅದರ ಪ್ರಭಾವದಿಂದ ದ.ಕ. ಜಿಲ್ಲೆಯಲ್ಲಿ ಜೂ. 21ರವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ.
- ಸಿ.ಎಸ್ ಪಾಟೀಲ್
ನಿರ್ದೇಶಕರು, ಬೆಂಗಳೂರು ಹವಾಮಾನ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News