ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ಪೂರೈಸಿ: ಡಾ. ಕುಮಾರ್

Update: 2021-06-17 16:22 GMT

ಮಂಗಳೂರು, ಜೂ.17: ಜಿಲ್ಲೆಯ ರೈತರ ಅವಶ್ಯಕತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ಪೂರೈಕೆ ಮಾಡಬೇಕು ಎಂದು ದ.ಕ. ಜಿಪಂ ಸಿಇಒ ಡಾ. ಕುಮಾರ್ ಸೂಚಿಸಿದ್ದಾರೆ.

ನಗರದ ಕೊಟ್ಟಾರದಲ್ಲಿರುವ ಜಿಪಂ ಕಚೇರಿಯ ಸಭಾಂಗಣದಲ್ಲಿ 2021-22ನೇ ಸಾಲಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗೆ ಸಂಬಂಧಿಸಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಪೂರ್ವಸಿದ್ಧತೆ ಕುರಿತು ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾನಾಡುತ್ತಿದ್ದರು.

ಜಿಲ್ಲೆಯಲ್ಲಿ ಮುಂಗಾರು ಮಳೆಯು ಉತ್ತಮವಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದೆ. ಹಾಗಾಗಿ ರೈತರಿಗೆ ಅಗತ್ಯವಿರುವ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಈ ಬಾರಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಗೆ ಗುರಿ ಹಾಕಲಾಗಿದೆ. ಎಂಒ ಫೋರ್ ಭತ್ತದ ಬೀಜಕ್ಕೆ ಹೆಚ್ಚಿನ ಬೇಡಿಕೆಯು ಜಿಲ್ಲೆಯಲ್ಲಿದೆ. ಪೂರ್ತಿ ಪ್ರಮಾಣದಲ್ಲಿ ಈ ಭತ್ತದ ಬೀಜ ಪೂರೈಸಲು ಆಗದಿದ್ದರೆ ಅದೇ ತಳಿಯ ಇತರೆ ಭತ್ತದ ಬೀಜಗಳನ್ನು ಪೂರೈಸಬೇಕು ಎಂದರು.

ಜಿಲ್ಲೆಗೆ 12 ಸಾವಿರ ಟನ್‌ಗಳಷ್ಟು ರಸಗೊಬ್ಬರದ ಅವಶ್ಯಕತೆಗಳಿವೆ. ಈಗಾಗಲೇ 6ಸಾವಿರ ಟನ್‌ಗಳಷ್ಟು ವಿವಿಧ ನಮೂನೆಯ ರಸಗೊಬ್ಬರಗಳು ಪೂರೈಕೆ ಆಗಿದೆ. 3 ಸಾವಿರ ಟನ್‌ಗಳಷ್ಟು ವಿತರಿಸಲಾಗಿದೆ ಎಂದ ಅವರು, ಬಿತ್ತನೆ ಬೀಜ ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿದರೆ ಅಥವಾ ಸರಕಾರ ನಿಗದಿಪಡಿಸಿದ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕ್ರಮ ಕೈಗೊಳ್ಳಬೇಕು. ಗೊಬ್ಬರ ಮಾರಾಟ ಕೇಂದ್ರಗಳ ಫಲಕದಲ್ಲಿ ಗೊಬ್ಬರದ ದರಗಳನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.

ಹೋಬಳಿ ಮಟ್ಟದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಲಾಕ್‌ಡೌನ್ ಸಂದರ್ಭಲ್ಲಿಯೂ ನಿಗದಿತ ಅವಧಿಗೆ ತೆರೆದು ರೈತರಿಗೆ ಅಗತ್ಯವಿರುವ ಬಿತ್ತನೆ ಬೀಜ, ಗೊಬ್ಬರ ಸೇರಿದ್ದಂತೆ ಮತ್ತಿತರ ಪರಿಕರಗಳನ್ನು ರಿಯಾಯಿತಿ ದರದಲ್ಲಿ ವಿತರಿಸುವಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಅಂದಾಜು 2,076 ಎಕರೆಯಷ್ಟು ಹಡಿಲು ಜಮೀನುಗಳಿದ್ದು ಅವುಗಳಲ್ಲಿ ರೈತರು ಬೆಳೆ ಬೆಳೆಯುವಂತೆ ಉತ್ತೇಜಿಸುವ ಕೆಲಸವನ್ನು ಕೃಷಿ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕಿ ಸೀತಾ ಎಂ.ಸಿ, ಉಪ ಕೃಷಿ ನಿರ್ದೇಶಕ ಬಾನುಪ್ರಕಾಶ್, ಮಂಗಳೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್, ಪುತ್ತೂರು ವಲಯ ಉಪ ಕೃಷಿ ನಿರ್ದೇಶಕ ಶಿವಶಂಕರ ದಾನೇಗೌಡ, ಬಂಟ್ವಾಳ ತಾಂತ್ರಿಕ ಅಧಿಕಾರಿ ನಂದನ್ ಶೆಣೈ, ಪುತ್ತೂರು, ಸುಳ್ಯ ತಾಲೂಕಿನ ಸಹಾಯಕ ನಿರ್ದೇಶಕ ನಾರಾಯಣ ಶೆಟ್ಟಿ, ಬೆಳ್ತಂಗಡಿಯ ಸಹಾಯಕ ಕೃಷಿ ನಿರ್ದೇಶಕ ರಂಜಿತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News