ಚೇತನ್ ಅಹಿಂಸಾ ವಿರುದ್ಧ ಸಂಘಪರಿವಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ: ಶೇಖರ್ ಲಾಯಿಲ ಆರೋಪ

Update: 2021-06-17 16:40 GMT

ಬೆಳ್ತಂಗಡಿ : ಬ್ರಾಹ್ಮಣ್ಯದ ಅಪಾಯಕಾರಿ ಬಗ್ಗೆ ಜಾಗೃತಿಗಾಗಿ ಅಂಬೇಡ್ಕರ್, ಪೆರಿಯಾರ್, ಬಸವಣ್ಣ ಅವರ ಹೇಳಿಕೆಗಳನ್ನು ಮತ್ತೊಮ್ಮೆ ನೆನಪಿದ ಚಲನಚಿತ್ರ ನಟ, ಯುವ ಹೋರಾಟಗಾರ ಚೇತನ್ ಅಹಿಂಸಾ ಅವರ ವಿರುದ್ಧ ಸಂಘಪರಿವಾರ ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್ ಲಾಯಿಲ ಆರೋಪಿಸಿದ್ದಾರೆ.

12 ಶತಮಾನದಲ್ಲಿಯೇ ಬಸವಣ್ಣ ಬ್ರಾಹ್ಮಣ್ಯದ ಅಪಾಯದ ಬಗ್ಗೆ ವಚನ ಚಳವಳಿ ನಡೆಸಿದ್ದಾರೆ. ಮುಂದುವರಿದ ಭಾಗವಾಗಿ ಪೆರಿಯಾರ್ ಅವರು ಬ್ರಾಹ್ಮಣ್ಯದ ವಿರುದ್ಧ ತೀವ್ರ ಸ್ವರೂಪದ ಹೋರಾಟ ನಡೆಸಿದರು. ನಂತರ ಅಂಬೇಡ್ಕರ್ ಅವರು ಬ್ರಾಹ್ಮಣ್ಯದ ವಿರುದ್ಧ ಚಳವಳಿ ನಡೆಸಿದ ಬಗ್ಗೆ ಸಾವಿರಾರು ದಾಖಲೆಗಳು ಲಭ್ಯವಿದೆ. ಅದನ್ನೇ ಸಾಮಾಜಿಕ ಜಾಲತಾಣದಲ್ಲಿ ಬರೆದ ನಟ ಚೇತನ್ ಅವರ ವಿರುದ್ಧ ಸುಳ್ಳು ಕೇಸ್ ದಾಖಲಿಸುವ ಮೂಲಕ ಸಂಘಟನೆಗಳು ನೀಚತನ ಪ್ರದರ್ಶಿಸುತ್ತಿದೆ. ಅಂಬೇಡ್ಕರ್ ಬರೆದ ಸಂವಿಧಾನವನ್ನು ಬದಲಾಯಿಸಲು ಹೊರಟ , ಸಂವಿಧಾನವನ್ನೇ ಸುಟ್ಟು ಹಾಕಿದ ಸಂಘಪರಿವಾರ ಅವರ ಹೇಳಿಕೆಯನ್ನು ಮತ್ತೊಮ್ಮೆ ನೆನಪಿಸಿದ ನಟ ಚೇತನ್ ವಿರುದ್ಧ ಕೇಸ್ ದಾಖಲಿಸಿದೆ. ಆ ಮೂಲಕ ದಲಿತ, ಆದಿವಾಸಿ, ರೈತ , ಕಾರ್ಮಿಕರ ಪರವಾದ ಚೇತನ್ ಅವರ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೋಪಿಸಿದ ಅವರು  ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಎಂಬಾತ  ತನ್ನ ಅಧಿಕಾರ ದುರ್ಬಳಕೆ ಮಾಡುವ ಮೂಲಕ ಚೇತನ್ ಮೇಲೆ ಸುಳ್ಳು ದೂರು ನೀಡಿರುವುದು ಅತ್ಯಂತ ಖಂಡನೀಯ. ಕಳೆದ ವರ್ಷ ಬಿಜೆಪಿ ನಾಯಕ ಜಗದೀಶ್ ಅಧಿಕಾರಿ ಎಂಬಾತ ಬಿಲ್ಲವ ಸಮುದಾಯವನ್ನು ಬಾಯಿಗೆ ಬಂದಂತೆ ನಿಂದಿಸಿದಾಗ ಮೌನವಾಗಿದ್ದು ಮೂಕರಂತೆ  ವರ್ತಿಸಿದ ಸಂಘಪರಿವಾರ ಇಂದು ಬ್ರಾಹ್ಮಣ್ಯದ ವಿರುದ್ಧ ಧ್ವನಿ ಎತ್ತಿದಾಗ ಹಿಂದುತ್ವದ ಮೂಲ ಅಜೆಂಡಾದಂತೆ ಮಾತನಾಡುತ್ತಿದ್ದಾರೆ. ಸಂಘಪರಿವಾರಕ್ಕೆ ಸತ್ಯವನ್ನು ಅರಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬ್ರಾಹ್ಮಣ್ಯ ಹಾಗೂ ಹಿಂದುತ್ವ ಸಾಮಾಜಿಕ ಶೋಷಣೆ, ಅಸ್ಪೃಶ್ಯತೆಯ ಮೂಲಬೇರು. ಅದರ ವಿರುದ್ಧ ದಲಿತ, ಆದಿವಾಸಿ, ಹಿಂದುಳಿದ ವರ್ಗಗಳು ಸಂಘಟಿತ ಹೋರಾಟ ನಡೆಸಬೇಕಾಗಿದೆ. ಸುಳ್ಳು ಕೇಸ್ ಮೂಲಕ ನೈಜ ಹೋರಾಟಗಾರರ ಹೋರಾಟವನ್ನು ಹತ್ತಿಕ್ಕಲಾಗದು. ಚೇತನ್ ಅವರ ಪರವಾಗಿ ನಾಡಿನ ಜನರು ನಿಲ್ಲಬೇಕು ಈ ನಾಡಿನಲ್ಲಿ ಅಂಬೇಡ್ಕರ್, ಪೆರಿಯಾರ್, ಬಸವಣ್ಣ ಸಿದ್ದಾಂತಕ್ಕೆ ಜಾಗವಿದೆಯೇ ಹೊರತು ಬ್ರಾಹ್ಮಣ್ಯಕ್ಕೆ ಅಲ್ಲ. ಕ್ಷಮೆ ಯಾಚಿಸಲು ಚೇತನ್ ಅಹಿಂಸಾ ಅವರು ಸಾವರ್ಕರ್ ಅಲ್ಲ. ಬದಲಾಗಿ ಅಂಬೇಡ್ಕರ್, ಪೆರಿಯಾರ್, ಬಸವಣ್ಣನವರ ಸಿದ್ಧಾಂತವನ್ನು ಉಸಿರಾಗಿಸಿಕೊಂಡವರು ಎಂದು ಶೇಖರ್ ಎಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News