ಗಾಝಿಯಾಬಾದ್‌ ಘಟನೆಗೆ ಸಂಬಂಧಿಸಿ ಪತ್ರಕರ್ತರ ವಿರುದ್ಧದ ಕೇಸ್ ಹಿಂಪಡೆಯುವಂತೆ ವಿವಿಧ ಸಂಘಟನೆಗಳಿಂದ ಆಗ್ರಹ

Update: 2021-06-17 17:24 GMT

ಲಕ್ನೋ, ಜೂ. 17: ವೃದ್ಧ ಮುಸ್ಲಿಂ ವ್ಯಕ್ತಿಯ ಮೇಲಿನ ಹಲ್ಲೆಗೆ ಸಂಬಂಧಿಸಿ ದಾಖಲಿಸಿದ ಪ್ರಕರಣದಲ್ಲಿ ಉತ್ತರಪ್ರದೇಶದ ಗಾಝಿಯಾಬಾದ್ ಜಿಲ್ಲೆಯ ಪೊಲೀಸರು ಹೆಸರು ಉಲ್ಲೇಖಿಸಿದ ಬಳಿಕ, ಪತ್ರಕರ್ತರು ಹಾಗೂ ಸುದ್ಧಿ ವೆಬ್ಸೈಟ್ The Wire ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಪತ್ರಕರ್ತರ ವಿವಿಧ ಸಂಘಟನೆಗಳು ಆಗ್ರಹಿಸಿವೆ.

The Wire ಅಲ್ಲದೆ, ಪತ್ರಕರ್ತರಾದ ರಾಣಾ ಅಯ್ಯೂಬ್ ಹಾಗೂ ಮುಹಮ್ಮದ್ ಝುಬೈರ್ ಅವರ ಹೆಸರನ್ನು ಕೂಡ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಘಟನೆಯ ಕುರಿತ ತಮ್ಮ ಟ್ವೀಟ್ ಗಳನ್ನು ಪರಿಶೀಲಿಸಿಲ್ಲ, ಆ ಮೂಲಕ ಅವರು ಘಟನೆಗೆ ಕೋಮ ಬಣ್ಣ ನೀಡಿದ್ದಾರೆ ಎಂದು ಎಫ್ಐಆರ್ನಲ್ಲಿ ಆರೋಪಿಸಲಾಗಿದೆ. ಆರೋಪಿಗಳಲ್ಲಿ ಲೇಖಕಿ ಸಬಾ ನಕ್ವಿ, ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟ್ಟರ್ ಹಾಗೂ ಕಾಂಗ್ರೆಸ್ ನ ಮೂವರು ನಾಯಕರು ಕೂಡ ಸೇರಿದ್ದಾರೆ. 

ನಿರ್ಭೀತರಾಗಿ ವರದಿ ಮಾಡುವುದನ್ನು ನಿರುತ್ಸಾಹಗೊಳಿಸಲು ಪತ್ರಕರ್ತರ ವಿರುದ್ಧ ಎಫ್ಐಆರ್ ದಾಖಲಿಸುವ ಉತ್ತರಪ್ರದೇಶ ಸರಕಾರದ ನಿರಂತರ ದಾಖಲೆಯ ಬಗ್ಗೆ ಕಳವಳ ಉಂಟಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಹೇಳಿದೆ. ಪತ್ರಕರ್ತರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಕೈಬಿಡಬೇಕು ಎಂದು ‘ಕಮಿಟಿ ಟು ಪ್ರೊಟೆಸ್ಟ್ ಜರ್ನಲಿಸ್ಟ್ಸ್’ ತನ್ನ ಹೇಳಿಕೆಯಲ್ಲಿ ಆಗ್ರಹಿಸಿದೆ. 

‘‘ಬಿಜೆಪಿಯನ್ನು ಟೀಕಿಸುವ ಹಾಗೂ ಅದನ್ನು ವೀಡಿಯೊದಲ್ಲಿ ಶೇರ್ ಮಾಡುವ ಪತ್ರಕರ್ತರನ್ನು ಭಾರತದ ಅಧಿಕಾರಿಗಳು ಗುರುತಿಸುತ್ತಿದ್ದಾರೆ ಹಾಗೂ ಅವರ ವಿರುದ್ಧ ಕಾನೂನು ಕ್ರಮ ಬಳಸಿ ನಿಗ್ರಹಿಸುತ್ತಿದ್ದಾರೆ. ಇದು ಪತ್ರಿಕಾ ಸ್ವಾತಂತ್ರದ ಮೇಲಿನ ಗಂಭೀರ ದಾಳಿ’’ ಎಂದು ಸಮಿತಿಯ ಏಶ್ಯಾ ಕಾರ್ಯಕ್ರಮ ಸಂಯೋಜಕ ಸ್ಟೀವನ್ ಬಟ್ಲರ್ ಹೇಳಿದ್ದಾರೆ.

ಪತ್ರಕರ್ತರ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದನ್ನು ಇಂಟರ್ನ್ಯಾಶನಲ್ ಪ್ರೆಸ್ ಇನ್ಸ್ಟಿಟ್ಯೂಟ್ ಖಂಡಿಸಿದೆ. ಭಾರತದಲ್ಲಿ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳ ಮೇಲಿನ ಕಾನೂನು ಕಿರುಕುಳವನ್ನು ಕೂಡಲೇ ನಿಲ್ಲಿಸಬೇಕು ಎಂದು ಅದು ಆಗ್ರಹಿಸಿದೆ. 

‘‘ಕ್ರಿಮಿನಲ್ ದೂರು ದಾಖಲಿಸುವುದು ಭಾರತದಲ್ಲಿ ಸ್ವತಂತ್ರ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಲು ಎಲ್ಲರೂ ಬಳಸುವ ಸಾಮಾನ್ಯ ತಂತ್ರ’’ ಎಂದು ಇಂಟರ್ನ್ಯಾಶನಲ್ ಪ್ರೆಸ್ ಇನ್ಸ್ಟಿಟ್ಯೂಟ್ ನ ಉಪ ನಿರ್ದೇಶಕ ಸ್ಕಾಟ್ ಗ್ರಿಫೆನ್ ಹೇಳಿದ್ದಾರೆ. 

ಈ ಪ್ರಕರಣ ಸ್ಪಷ್ಟವಾಗಿ ನ್ಯಾಯಾಂಗ ಕಿರುಕುಳ ಎಂದು ‘ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್’ ಹೇಳಿದೆ. ಪತ್ರಕರ್ತರ ವಿರುದ್ಧದ ಎಫ್ಐಆರ್ ಅನ್ನು ಕೂಡಲೇ ರದ್ದುಗೊಳಿಸುವಂತೆ ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕೂಡ ಆಗ್ರಹಿಸಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News