ಮಾಜಿ ಸಚಿವ ಅಭಯಚಂದ್ರ ಜೈನ್‌ ರಿಂದ ಅಂಗಾಂಗ ದಾನದ ಘೋಷಣೆ

Update: 2021-06-18 08:01 GMT

ಮಂಗಳೂರು, ಜೂ. 18: ಸರಳ ಜೀವನದ ಮೂಲಕ ಮಾದರಿಯಾಗಿದ್ದ ನಟ ಸಂಚಾರಿ ವಿಜಯ್ ಮರಣ ನಂತರವೂ ಹಲವರ ಬದುಕಿಗೆ ಜೀವದಾನದ ಮಾದರಿಯಾಗಿದ್ದಾರೆ. ಅವರ ನಡೆ ಸಮಾಜದ ಯುವಜನರು ಹಾಗೂ ರಾಜಕಾರಣಿಗಳಿಗೆ ಪ್ರೇರಣೆಯಾಗಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ತಿಳಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿಂದು ಸಂಚಾರಿ ವಿಜಯ್ ಭಾವಚಿತ್ರಕ್ಕೆ ಹೂಮಾಲೆ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಮರಣಾ ನಂತರ ತಾನೂ ಕೂಡಾ ತನ್ನ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿರುವುದಾಗಿ ಪ್ರಕಟಿಸಿದರು.

‘‘ನನ್ನ ಆಕಸ್ಮಿಕ ಮರಣದ ಬಳಿಕ ನನ್ನ ಅಂಗಾಂಗಳನ್ನು ದಾನ ಮಾಡುವಂತೆ ಉಯಿಲು ಬರೆಯಲು ನಿರ್ಧರಿಸಿದ್ದೇನೆ’’ ಎಂದು ಹೇಳಿದ ಅವರು, ದ.ಕ. ಜಿಲ್ಲಾ ಕಾಂಗ್ರೆಸ್‌ನ ಯುವಕರು, ರಾಜಕಾರಣಿಗಳು ಕೂಡಾ ಈ ಕಾರ್ಯಕ್ಕೆ ಮುಂದಾಗಬೇಕು ಎಂದು ಅವರು ಹೇಳಿದರು.

ಪಾಶ್ಚಾತ್ಯ ದೇಶಗಳಲ್ಲಿ ಈ ಅಂಗಾಂಗ ದಾನ ಪ್ರಕ್ರಿಯೆ ಸಹಜವಾಗಿ ನಡೆಯುತ್ತದೆ. ನಮ್ಮಲ್ಲಿಯೂ ಇಂತಹ ಪ್ರಕ್ರಿಯೆ ಮೂಲಕ ಕಣ್ಣು, ಹೃದಯ, ಕಿಡ್ನಿ ಸೇರಿದಂತೆ ದೇಹದ ವಿವಿಧ ಭಾಗಗಳಿಗಾಗಿ ಹಾತೊರೆಯುತ್ತಿರುವವರ ಬಾಳಿಗೆ ನಾವು ಬೆಳಕಾಗಬಹುದು. ಅದನ್ನು ಸಂಚಾರಿ ವಿಜಯ್ ಮಾಡಿ ತೋರಿಸಿದ್ದಾರೆ ಎಂದು ಅವರು ಹೇಳಿದರು.

ಯುವ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ವಿನಯ್‌ ರಾಜ್, ಶಾಲೆಟ್ ಪಿಂಟೋ, ಸದಾಶಿವ ಉಳ್ಳಾಲ್, ಲಾರೆನ್ಸ್, ಪ್ರಕಾಶ್ ಸಾಲ್ಯಾನ್, ಸವದ್ ಸುಳ್ಯ, ನಿಖಿಲ್ ಪೂಜಾರಿ, ಫಾರೂಕ್, ಪದ್ಮನಾಭ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News