ತುಂಬೆ ಕಾಲೇಜಿನಲ್ಲಿ ಸಂಸ್ಥಾಪಕರ ದಿನಾಚರಣೆ

Update: 2021-06-18 08:50 GMT

ಬಂಟ್ವಾಳ : ದಿ. ಡಾ. ಬಿ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಸಮಾಜದ ಎಲ್ಲಾ ಸ್ತರದ ಜನರಿಗೆ ಬೇಕಾದವರಾಗಿದ್ದರು. ಶಿಕ್ಷಣ, ಉದ್ಯಮ, ಸಾಮಾಜಿಕ ರಂಗಗಳಲ್ಲಿ ಜಾತಿ ಮತ ಭೇದವಿರದೆ, ಬಡವ ಬಲ್ಲಿದ ತಾರತಮ್ಯವಿಲ್ಲದೆ ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು.  ತನ್ನ ತಂದೆಯ ಸೌಜನ್ಯ, ಗುಣಾದರ್ಶಗಳು ಮುಂದಿನ ಪೀಳಿಗೆಗೆ ಅನುಕರಣೀಯವಾದದ್ದು.  ಆದುದರಿಂದ ಅವರ ಜನ್ಮದಿನವನ್ನು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆ ಹಾಗೂ ಬಿ. ಎ. ಗ್ರೂಪ್   ವತಿಯಿಂದ ಸ್ಥಾಪಕರ ದಿನಾಚರಣೆಯನ್ನಾಗಿ ಆಚರಿಸೋಣ ಎಂದು ಮುಹಿಯುದ್ದೀನ್ ಶಿಕ್ಷಣ ಸಂಸ್ಥೆ ತುಂಬೆ ಇದರ ಅಧ್ಯಕ್ಷರಾದ ಬಿ. ಅಬ್ದುಲ್ ಸಲಾಂ ಹೇಳಿದರು.

ಅವರು ಇಂದು ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸ್ಥಾಪಕರ ದಿನಾಚರಣಾ ಕಾರ್ಯಕ್ರಮದಲ್ಲಿ ಬಿ. ಅಹ್ಮದ್ ಹಾಜಿಯವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ತುಂಬೆ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಕೆ. ಎನ್. ಗಂಗಾಧರ ಆಳ್ವ ಮಾತನಾಡಿ, ಡಾ. ಅಹ್ಮದ್ ಹಾಜಿ ಮುಹಿಯುದ್ದೀನ್ ಅವರು ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದದವರೊಂದಿಗೆ ಬಹಳ ಆತ್ಮೀಯವಾಗಿ ಬೆರೆತು ಮಾರ್ಗದರ್ಶನ ಮಾಡುವ ವ್ಯಕ್ತಿಯಾಗಿದ್ದರು.  ತನ್ನ ಪ್ರತೀ ವರ್ಷದ ಜನ್ಮದಿನದಂದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ವೃಂದದವರಿಗೆ ಸ್ವತ: ಬಂದು ಸಿಹಿತಿಂಡಿ ಹಂಚಿ ಸಂಭ್ರಮಿಸುತ್ತಿದ್ದರು.  ಅವರಿಲ್ಲದ ಈ ಹೊತ್ತು ನಾವು ಜ್ಞಾನ , ಮಾರ್ಗದರ್ಶನವಿಲ್ಲದೆ ಬಡವಾಗಿದ್ದೇವೆ ಎಂದರೂ ತಪ್ಪಲ್ಲ.  ಅವರ ಜೀವನ ಕ್ರಮ ಹಾಗೂ ಗುಣಾದರ್ಶಗಳನ್ನು ನಾವು ಅನುಸರಿಸುತ್ತಾ ಮುಂದಿನ ಜನಾಂಗಕ್ಕೆ ಮಾದರಿಯಾಗುವುದೇ ನಾವು ಅವರಿಗೆ ನೀಡುವ ಗೌರವವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮೊದಲಿಗೆ ಕಚೇರಿ ಅಧೀಕ್ಷಕರಾದ ಬಿ. ಅಬ್ದುಲ್ ಕಬೀರ್ ಸ್ವಾಗತಿಸಿದರು.  ಮುಖ್ಯ ಶಿಕ್ಷಕರಾದ ಶ್ರೀನಿವಾಸ್ ಕೆದಿಲ ವಂದಿಸಿದರು.  ಜಗದೀಶ್ ರೈ ಬಿ ಹಾಗೂ ಸಾಯಿರಾಮ್ ನಾಯಕ್ ಸಹಕರಿಸಿದರು.  ಕಚೇರಿ ಸಿಬ್ಬಂದಿಗಳಾದ ಯೋಗೀಶ್ ಬಿ.  ಸುನೀತ , ಸವಿತ , ಪ್ರಕಾಶ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News