ಯೋಗ ಅಧಿವೇಶನ ನಡೆಸಲಿರುವ ಪ್ರಜ್ಞಾ ಠಾಕೂರ್: ಪ್ರಧಾನಿ ಮನಸ್ಸು ಬದಲಾಯಿಸಿದ್ದಾರೆಯೇ? ಎಂದು ಪ್ರಶ್ನಿಸಿದ ಕಾಂಗ್ರೆಸ್
ಹೊಸದಿಲ್ಲಿ: ಅಂತರಾಷ್ಟ್ರೀಯ ಯೋಗ ದಿನದಂದು ಮುಂದಿನ ಸೋಮವಾರ ಬಿಜೆಪಿ ಸಂಸದೆ ಪ್ರಜ್ಞಾ ಠಾಕುರ್ ಅವರು ಸಂಸದರಿಗಾಗಿ ಆಯೋಜಿಸಲಿರುವ ಆನ್‍ಲೈನ್ ಯೋಗ ಅಧಿವೇಶನವು ವಿಪಕ್ಷ ಕಾಂಗ್ರೆಸ್‍ನಿಂದ ತೀವ್ರ ಟೀಕೆಗೊಳಗಾಗಿವೆ. ಪ್ರಧಾನಿ ಈ ವಿವಾದಿತ ಸಂಸದೆ ಕುರಿತಂತೆ ತಮ್ಮ ಮನಸ್ಸು ಬದಲಾಯಿಸಿದ್ದಾರೆಯೇ ಎಂಬ ಪ್ರಶ್ನೆಯನ್ನೂ ಕಾಂಗ್ರೆಸ್ ಕೇಳಿದೆ.
ಸಂಸದರಿಗಾಗಿ ಆಯೋಜಿಸಲಾಗಿರುವ ನಾಲ್ಕು ಅಧಿವೇಶನಗಳಲ್ಲಿ ಒಂದನ್ನುದ್ದೇಶಿಸಿ ಪ್ರಜ್ಞಾ ಮಾತನಾಡಲಿದ್ದು ಈ ಯೋಗ ಅಧಿವೇಶನಗಳ ವೇಳಾಪಟ್ಟಿಯನ್ನು ಎಲ್ಲಾ ಸಂಸದರಿಗೆ ಗುರುವಾರ ಕಳುಹಿಸಲಾಗಿದೆ.
"ಪ್ರಜ್ಞಾ ಠಾಕುರ್ ಕುರಿತು ಮೋದಿ ಸಾಹಿಬ್ ತಮ್ಮ ಮನಸ್ಸು ಬದಲಾಯಿಸಿದ್ದಾರೆಯೇ? ಪ್ರಧಾನಿಯ ಮೆಚ್ಚುಗೆಯ ಕಾರ್ಯಕ್ರಮವಾದ ಯೋಗ ದಿನದಂದು ಆಕೆ ಮುಖ್ಯ ಅತಿಥಿಯಾಗಿರುವುದು ಮನ್ ಕಿ ಮಾಫ್ (ಹೃದಯದಿಂದ ಕ್ಷಮಿಸಿರುವುದು) ಎಂಬುದು ತಿಳಿಯುತ್ತದೆ," ಎಂದು ಕಾಂಗ್ರೆಸ್ ಸಂಸದ ಮಣಿಕ್ಕಂ ಠಾಗೋರ್ ಟ್ವೀಟ್ ಮಾಡಿದ್ದಾರೆ. ಪ್ರಜ್ಞಾ ಠಾಕುರ್ ಅವರು ಮಹಾತ್ಮ ಗಾಂಧಿ ಹಂತಕ ನಾಥೂರಾಂ ಗೋಡ್ಸೆಯನ್ನು ದೇಶಭಕ್ತನೆಂದು ಬಣ್ಣಿಸಿದ್ದಕ್ಕೆ ಆಕೆಯನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂಬ ಪ್ರಧಾನಿಯ ಈ ಹಿಂದಿನ ಹೇಳಿಕೆಯನ್ನು ಉಲ್ಲೇಖಿಸಿ ಮಣಿಕ್ಕಂ ಟ್ವೀಟ್ ಮಾಡಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಪ್ರಜ್ಞಾ ಹೇಳಿಕೆಯ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿದ್ದಾಗ "ಆಕೆ ಕ್ಷಮೆಯಾಚಿಸಿರುವುದು ಸರಿ, ಆದರೆ ನಾನು ಯಾವತ್ತೂ ಆಕೆಯನ್ನು ಹೃದಯದಿಂದ ಮನ್ನಿಸುವುದಿಲ್ಲ" ಎಂದು ಹೇಳಿದ್ದರು.