ವಿದ್ಯುತ್ ಚಿತಾಗಾರ ಅಭಿವೃದ್ಧಿ ಕಾಮಗಾರಿ ವೀಕ್ಷಣೆ
ಮಂಗಳೂರು, ಜೂ.18: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯೊಳಗೆ ಕೋವಿಡ್ ಹಾಗೂ ಇತರ ಕಾರಣಗಳಿಂದ ಮೃತಪಟ್ಟವರ ಅಂತ್ಯಕ್ರಿಯೆಗಾಗಿ ಬೋಳೂರು ಸ್ಮಶಾನದಲ್ಲಿ ಸರಕಾರದ ಅನುದಾನದಡಿ 71 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಕಾಮಗಾರಿಯನ್ನು ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಆಯುಕ್ತ ಅಕ್ಷಯ್ ಶ್ರೀಧರ್ ಶುಕ್ರವಾರ ಪರಿಶೀಲಿಸಿದರು.
ಪ್ರಸ್ತುತ ಎರಡು ವಿದ್ಯುತ್ ಕುಲುಮೆ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈ ಪೈಕಿ ಈಗಾಗಲೇ 1 ವಿದ್ಯುತ್ ಕುಲುಮೆಯ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಿದ್ಧವಾಗಿದೆ. ಇನ್ನೊಂದು ವಿದ್ಯುತ್ ಕುಲುಮೆಯು ಮುಂದಿನ 15 ದಿನಗಳಲ್ಲಿ ಸಂಪೂರ್ಣಗೊಳಿಸುವಂತೆ ಮಹಾಪೌರರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪೂರ್ಣಗೊಂಡಿರುವ ವಿದ್ಯುತ್ ಚಿತಾಗಾರವೊಂದನ್ನು ಜೂ.19ರಿಂದ ಸಾರ್ವಜನಿಕರ ಬಳಕೆಗೆ ಚಾಲನೆಗೊಳಿಸುವುದಾಗಿ ಮಹಾಪೌರರು ಪ್ರಕಟಿಸಿದರು. ಸುರತ್ಕಲ್ ಪ್ರದೇಶದ ನಾಗರಿಕರಿಗೆ ಅನುಕೂಲವಾಗುವಂತೆ ಸುರತ್ಕಲ್ ಸ್ಮಶಾನದಲ್ಲಿ 1.80 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ಅಭಿವೃದ್ಧಿಪಡಿಸುವ ಕಾಮಗಾರಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ. ಪ್ರಸ್ತುತ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮನಪಾ ಸದಸ್ಯರಾದ ಜಗದೀಶ್ ಶೆಟ್ಟಿ ಬೋಳೂರು, ಗಣೇಶ್ ಕುಲಾಲ್, ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.