ಸೈಕಲ್‌ ಮೂಲಕ ಬಹುದೂರ ಕ್ರಮಿಸಿ ಆಹಾರ ತಲುಪಿಸುತ್ತಿದ್ದ ಡೆಲಿವರಿ ಬಾಯ್‌ ಗೆ ಬೈಕ್‌ ಉಡುಗೊರೆ ನೀಡಲಿರುವ ನೆಟ್ಟಿಗರು

Update: 2021-06-18 13:47 GMT
Photo: Facebook

ಹೈದರಾಬಾದ್: ಸೈಕಲ್‍ನಲ್ಲಿಯೇ ಆರ್ಡರ್ ಡೆಲಿವರಿ ಮಾಡುತ್ತಿದ್ದ ಹೈದರಾಬಾದ್‍ನ ಝೊಮ್ಯಾಟೋ ಡೆಲಿವರಿ ಬಾಯ್ ಮುಹಮ್ಮದ್ ಅಖೀಲ್‍ಗೆ ಸಾಮಾಜಿಕ ಜಾಲತಾಣಿಗರು ಕ್ರೌಡ್ ಫಂಡಿಂಗ್ ಮೂಲಕ ಹಣ ಸಂಗ್ರಹಿಸಿದ್ದು ಆ ಹಣದಿಂದ ಆತನಿಗೆ ಶೀಘ್ರವೇ ಬೈಕ್ ಉಡುಗೊರೆ ನೀಡಲಿದ್ದಾರೆ.

ಸೋಮವಾರ ರಾತ್ರಿ ಹೈದರಾಬಾದ್‍ನ ರಾಬಿನ್ ಮುಕೇಶ್ ಝೊಮ್ಯಾಟೋ ಮೂಲಕ ಆಹಾರಕ್ಕಾಗಿ ಆರ್ಡರ್ ಮಾಡಿದ್ದರು. ಇಪ್ಪತ್ತು ನಿಮಿಷಗಳ ನಂತರ ಅವರ ಆರ್ಡರ್ ತಲುಪಿತ್ತು. ಅವರಿಗೆ ಆಹಾರ  ಡೆಲಿವರಿ ಮಾಡಿದ ಯುವಕ ಸೈಕಲ್‍ನಲ್ಲಿ ಬಂದಿರುವುದನ್ನು ನೋಡಿ ರಾಬಿನ್ ಗೆ ಅಚ್ಚರಿಯಾಗಿತ್ತು. ಕಳೆದ ಒಂದು ವರ್ಷದಿಂದ ಡೆಲಿವರಿ ಬಾಯ್ ಆಗಿ ಸೇವೆ ಸಲ್ಲಿಸುತ್ತಿರುವ ಅಖೀಲ್  ಸೋಮವಾರ ರಾಬಿನ್ ಅವರ ಆಹಾರ ತಲುಪಿಸಲು 9 ಕಿಮೀ ದೂರವನ್ನು 20 ನಿಮಿಷದಲ್ಲಿ ಕ್ರಮಿಸಿದ್ದರು.

ಮುಕೇಶ್‍, ಅಖೀಲ್ ಸೈಕಲ್ ಜತೆಗಿರುವ ಚಿತ್ರ ಕ್ಲಿಕ್ಕಿಸಿ  ಆತ ಮಿಂಚಿನ ವೇಗದಲ್ಲಿ ಆಹಾರ ಡೆಲಿವರಿ ಮಾಡಿದ್ದನ್ನು ವಿವರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಆತ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ, ಆತ ನಿಮಗೆ ಆಹಾರ ಡೆಲಿವರಿ ಮಾಡಿದ್ದಲ್ಲಿ ಉದಾರ ಟಿಪ್ಸ್ ನೀಡಿ ಎಂದು ಮುಕೇಶ್ ಬರೆದಿದ್ದರು.

ಈ ಪೋಸ್ಟ್ ಹಲವರಿಗೆ ಮೆಚ್ಚುಗೆಯಾಗಿತ್ತು, ತರುವಾಯ ಅಖೀಲ್ ಗೆ ಏನಾದರೂ ಸಹಾಯ ಮಾಡಬೇಕೆಂದು ನಿರ್ಧರಿಸಿದ ಮುಕೇಶ್ ಆನ್‍ಲೈನ್ ಮೂಲಕ ಹಣ ಸಂಗ್ರಹಿಸಲು ಮುಂದಾದರು. ಕೇವಲ ಹತ್ತು ಗಂಟೆ ಅವಧಿಯಲ್ಲಿ ರೂ 60,000 ಸಂಗ್ರಹವಾಗಿತ್ತಲ್ಲದೆ ಅಂತಿಮವಾಗಿ ಒಟ್ಟು ಸಂಗ್ರಹವಾದ ಹಣ ರೂ 73,370 ಆಗಿತ್ತು. "ಈ ಹಣ ಬಳಸಿ ಅಖೀಲ್‍ಗಾಗಿ ರೂ 65,000 ಬೆಲೆಯ ಟಿವಿಎಸ್ ಎಕ್ಸ್‍ಎಲ್ ಮೋಟಾರ್ ಸೈಕಲ್ ಬುಕ್  ಮಾಡಲಾಗಿದ್ದು ಆತನಿಗೆ ವಾಹನವನ್ನು ಶೀಘ್ರ ನೀಡಲಾಗುವುದು ಹಾಗೂ ಉಳಿದ ಹಣವನ್ನು ಆತನ ಕಾಲೇಜ್ ಶುಲ್ಕ ಭರಿಸಲು ನೀಡಲಾಗುವುದು" ಎಂದು ಮುಕೇಶ್ ಹೇಳಿದ್ದಾರೆ.

ತನಗೆ ಸಹಾಯ ಮಾಡಿದ ಸಾಮಾಜಿಕ ಜಾಲತಾಣಿಗರಿಗೆ ತಾವು ಅಭಾರಿ ಎಂದು ಹೇಳಿರುವ ಅಖೀಲ್ ಆರ್ಥಿಕ ಮುಗ್ಗಟ್ಟಿನಿಂದಾಗಿ ದ್ವಿಚಕ್ರವಾಹನ ಖರೀದಿಸುವುದು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News