ಉಡುಪಿ ಜಿಲ್ಲೆಯಲ್ಲಿ 5 ಆಮ್ಲಜನಕ ಉತ್ಪಾದನಾ ಘಟಕಗಳ ಸ್ಥಾಪನೆ

Update: 2021-06-18 13:45 GMT

ಉಡುಪಿ, ಜೂ.17: ಕೊರೋನ ಎರಡನೇ ಅಲೆಯಿಂದ ಆಮ್ಲಜನಕದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ 5 ಕಡೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ಉದ್ದೇಶಿಸಿದೆ.

ಅಜ್ಜರಕಾಡುವಿನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಯೂನಿಯನ್ ಬ್ಯಾಂಕ್ ಸೇರಿದಂತೆ ಕೇಂದ್ರ ಸರಕಾರದ ಸಂಸ್ಥೆಗಳ ಸಿಎಸ್‌ಆರ್ ನಿಧಿಯಿಂದ 2,500 ಎಲ್‌ಪಿಎಂ ಸಾಮರ್ಥ್ಯ, ಕುಂದಾಪುರದಲ್ಲಿ ಗೇಲ್ ಸಂಸ್ಥೆಯ ಸಹಯೋಗದಲ್ಲಿ 1,000 ಎಲ್‌ಪಿಎಂ ಸಾಮರ್ಥ್ಯ, ಕಾರ್ಕಳದಲ್ಲಿ ಉದ್ಯಮಿ ಜಿ.ಶಂಕರ್ ಸಹಯೋಗದಲ್ಲಿ 1,000 ಎಲ್‌ಪಿಎಂ ಸಾಮರ್ಥ್ಯ ಮತ್ತು ಹೆಬ್ರಿಯಲ್ಲಿ ಮಂಗಳೂರು ಕೆಮಿಕಲ್ ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ 50 ಎಲ್‌ಪಿಎಂ ಹಾಗೂ ಬೈಂದೂರಿನಲ್ಲಿ ರಾಜ್ಯ ಸರಕಾರದ ಅನುದಾನದಲ್ಲಿ 390 ಎಲ್‌ಪಿಎಂ ಸಾಮರ್ಥ್ಯದ ಆಮ್ಲಜನಕ ಉತ್ಪಾದನ ಘಟಕ ಸ್ಥಾಪನೆಯಾಗಲಿದೆ.

ಉಡುಪಿ ಜಿಲ್ಲಾಸ್ಪತ್ರೆಯ ಹಿಂಭಾಗದಲ್ಲಿ ಎರಡು ಘಟಕಗಳು ನಿರ್ಮಾಣ ವಾಗಲಿದೆ. ಇದರ ನಿರ್ಮಾಣ ಕಾಮಗಾರಿಯನ್ನು ಎನ್‌ಎಚ್‌ಎಐ ಹಾಗೂ ನಿರ್ಮಿತಿ ಕೇಂದ್ರ ನಿರ್ವಹಿಸಲಿದೆ. ಪರಿಸರದಿಂದ ಆಮ್ಲಜನಕವನ್ನು ಕ್ರೋಢಿಕರಿಸಿ ಧೂಳಿನ ಕಣಗಳು, ಬ್ಯಾಕ್ಟೀರಿಯಾ ಹಾಗೂ ಇತರೆ ಕಲ್ಮಶಗಳನ್ನು ಆಮ್ಲಜನಕ ದಿಂದ ಬೇರ್ಪಡಿಸಿದ ಬಳಿಕ ಸಾರಜನಕವನ್ನು ಪ್ರತ್ಯೇಕಿಸಿದ ಶುದ್ಧವಾದ ವೈದ್ಯಕೀಯ ಆಮ್ಲಜನಕ ರೋಗಿಗಳಿಗೆ ತಲುಪುತ್ತದೆ.

ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಗೆ 6000 ಲೀಟರ್ ಆಮ್ಲಜನಕ ಕೇವಲ ಮೂರೇ ದಿನಕ್ಕೆ ಸಾಕಾ ಗುತ್ತಿತ್ತು. ಒಬ್ಬ ವ್ಯಕ್ತಿಗೆ ಒಂದು ನಿಮಿಷಕ್ಕೆ 4ರಿಂದ 40 ಲೀಟರ್ ಆಮ್ಲಜನಕ ಬೇಕಾಗುತ್ತದೆ. ಹೊಸದಾಗಿ ಸ್ಥಾಪನೆಯಾಗಲಿರುವ ಆಮ್ಲಜನಕ ಉತ್ಪಾದನಾ ಘಟಕದಿಂದ ಆಸ್ಪತ್ರೆಯಲ್ಲಿನ ಆಮ್ಲಜನಕದ ಕೊರತೆ ನೀಗಬಹುದು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News