ಸೆಲೂನ್ ತೆರೆಯಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ

Update: 2021-06-18 13:48 GMT

ಉಡುಪಿ, ಜೂ.18: ಕೊರೋನ ಲಾಕ್‌ಡೌನ್‌ನಿಂದ ಉಡುಪಿ ಜಿಲ್ಲೆಯಲ್ಲಿ ಮುಚ್ಚಿರುವ ಸೆಲೂನ್ ಹಾಗೂ ಬ್ಯೂಟಿಪಾರ್ಲರ್‌ಗಳನ್ನು ತೆರೆಯಲು ಅನುಮತಿ ನೀಡುವಂತೆ ಒತ್ತಾಯಿಸಿ ಉಡುಪಿ ಜಿಲ್ಲಾ ಸವಿತಾ ಸಮಾಜ ಇಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರಿಗೆ ಮನವಿ ಸಲ್ಲಿಸಿದೆ.

ಕಳೆದ ಬಾರಿಯ ಲಾಕ್‌ಡೌನ್‌ನಿಂದ ಕ್ಷೌರಿಕರು ಆರ್ಥಿಕವಾಗಿ ತೀರಾ ಕಂಗೆಟ್ಟಿದ್ದು, ಈ ಬಾರಿಯ ಎರಡನೇ ಅಲೆಯಿಂದ ಆಗಿರುವ ಲಾಕ್‌ಡೌನ್‌ನಿಂದ ಕಳೆದ ಎರಡು ತಿಂಗಳುಗಳಿಂದ ಕೆಲಸ ಇಲ್ಲದೆ ಸಂಕಷ್ಟ ಪಡುತ್ತಿದ್ದಾರೆ. ದಿನಗೂಲಿ ನೌಕರರಂತೆ ದುಡಿಯುವ ಕ್ಷೌರಿಕರು ಅಂಗಡಿ ಬಾಡಿಗೆ, ಮನೆ ಬಾಡಿಗೆ, ವಿದ್ಯುತ್ ಬಿಲ್, ದಿನವಹಿ ಖರ್ಚು ಸರಿದೂಗಿಸಲಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಸರಕಾರ ಘೋಷಿಸಿರುವ 2000 ರೂ. ಪರಿಹಾರ ಸಹಾಯಧನ ಸಾಲದೆ ಕ್ಷೌರಿಕರ ಬದುಕು ದುಸ್ತರವಾಗಿದೆ.

ಇದೀಗ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಕ್ಷೌರಿಕರು ಇಲಾಖೆ ಸೂಚಿಸಿದ ಮಾರ್ಗಸೂಚಿ ಅನ್ವಯ ಸೆಲೂನ್ ಹಾಗೂ ಬ್ಯೂಟಿಪಾರ್ಲರ್‌ಗಳಲ್ಲಿ ನಿಯಮಗಳನ್ನು ಪಾಲಿಸಿ ವೃತ್ತಿ ಸೇವೆ ನೀಡಲು ಬದ್ಧರಾಗಿದ್ದಾರೆ. ಆದುರದಿಂದ ಆದಷ್ಟು ಬೇಗ ಸೆಲೂನ್- ಬ್ಯೂಟಿಪಾರ್ಲರ್‌ಗಳನ್ನು ತೆರೆಯಲು ಅನುಮತಿ ನೀಡಿ ಆದೇಶ ಹೊರಡಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರ್, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಗೌರವಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News