ಭಟ್ಕಳ: ಮನೆಮನೆಗೆ ತೆರಳಿ ಆರೋಗ್ಯ ತಪಾಸಣೆ ನಡೆಸುತ್ತಿರುವ ವೆಲ್ಫೇರ್ ಮೊಬೈಲ್ ಕ್ಲಿನಿಕ್

Update: 2021-06-18 16:48 GMT

ಭಟ್ಕಳ: ಭಟ್ಕಳದ ವಿವಿಧ ಸಾಮಾಜಿಕ ಸಂಘಟನೆಗಳು ಸೇರಿಕೊಂಡು ನಗರ ಹಾಗೂ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ನೀಡುವ ಮೊಬೈಲ್ ಕ್ಲಿನಿಕ್ ವ್ಯವಸ್ಥೆ ಮಾಡಿದ್ದು ಜನರ ಪಾಲಿಗೆ ಸಂಜೀವಿನಿಯಾಗಿ ಮಾರ್ಪಟ್ಟಿದ್ದೆ. 

ಮಜ್ಲಿಸೆ ಇಸ್ಲಾಹ್-ವ-ತಂಝೀಮ್, ರಾಬಿತಾ ಸೂಸೈಟಿ, ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ, ಇಂಡಿಯನ್ ನವಾಯಾತ್ ಫೋರಂ, ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಸಂಘಟನೆಗಳು ಜಂಟಿಯಾಗಿ ಕಳೆದ ಒಂದು ತಿಂಗಳಿಂದ ಸಂಚಾರಿ ಆರೋಗ್ಯ ವಾಹನ ಸೇವೆ ನೀಡುತ್ತಿದ್ದು ನಗರ ಹಾಗೂ ಗ್ರಾಮೀಣವಾಸಿಗರಿಗೆ ಇದು ವರದಾನವಾಗಿ ಮಾರ್ಪಪಟ್ಟಿದೆ. 

ಮೊಬೈಲ್ ಕ್ಲಿನಿಕ್‌ನಲ್ಲಿ ಓರ್ವ ವೈದ್ಯರು, ಓರ್ವ ನರ್ಸ, ಫಾರ್ಮಾಸಿಸ್ಟ್ ಜೊತೆಗೆ ಅವಶ್ಯಕವಾದ ಆಮ್ಲಜಕದ ಸಿಲಿಂಡರ್ ಇತ್ಯಾದಿಗಳನ್ನು ಹೊಂದಿದೆ. ಮಾರುತಿ ಇಕೋ ಕಾರಿನಲ್ಲಿ ಮೊಬೈಲ್ ಕ್ಲಿನಿಕ್‌ನ್ನು ತಾಲೂಕಿನ ಹಳ್ಳಿ ಹಳ್ಳೀಗೆ ಕೊಂಡೊಯ್ದು ಮನೆ ಬಾಗಿಲಿನಲ್ಲಿ ಅನಾರೋಗ್ಯ ಪೀಡಿತರನ್ನು ಪರೀಕ್ಷಿಸಿ ಅಗತ್ಯ ವೈದ್ಯಕೀಯ ನೆರವು ನೀಡುತ್ತಿದ್ದು ಕೋವಿಡ್‌ನಿಂದ ಭಯಬೀತರಾಗಿರುವ ಜನತೆಗೆ ಧೈರ್ಯ ತುಂಬಿ ಆಸ್ಪತ್ರೆಗೆ ತೆರಳಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಹಲೆ ನೀಡಲಾಗುತ್ತಿದೆ.

ಕೇವಲ ಭಟ್ಕಳ ತಾಲೂಕು ಮಾತ್ರವಲ್ಲ ಹೊನ್ನಾವರದ ಗೇರುಸೊಪ್ಪ, ಉಪ್ಪೋಣಿ, ಸಂಶಿ ಮೊದಲಾದ ಗ್ರಾಮೀಣ ಭಾಗಕ್ಕೂ ತೆರಳಿ ತಮ್ಮ ಸೇವೆಯನ್ನು ನೀಡುತ್ತಿರುವ ವೈದ್ಯರ ತಂಡಕ್ಕೆ ಉತ್ತಮ ಪ್ರತಿಕ್ರಿಯೆ ಹಳ್ಳಿಗಳಲ್ಲಿ ದೊರೆತಿದೆ.

ತನ್ನ ಉತ್ತಮ ಸೇವೆಯಿಂದ  ಗಮನ  ಸೆಳೆದಿರುವ ಮೊಬೈಲ್ ಕ್ಲಿನಿಕ್  ಆಯಾ ಭಾಗದ ಕ್ರೀಡಾ ಸಂಘದ ಯುವಕರು, ಮುಖಂಡರು ತಮ್ಮ ಭಾಗದ ಅನಾರೋಗ್ಯ ಪೀಡಿತರ ಬಗ್ಗೆ ಮೊಬೈಲ್ ಕ್ಲೀನಿಕ್‌ಗೆ ಮಾಹಿತಿ ನೀಡುತ್ತಿದ್ದು, ವೈದ್ಯರ ವಾಹನ ಮನೆ ಬಾಗಿಲಿಗೆ ಬಂದು ಚಿಕಿತ್ಸೆ ನೀಡುತ್ತಿದೆ. ತಾಲೂಕಿನ ಯಾವುದೇ ಭಾಗದ ಜನರು ಉಚಿತವಾಗಿ ಮೊಬೈಲ್ ಕ್ಲಿನಿಕ್‌ನ ನೆರವನ್ನು ಪಡೆಯಬಹುದಾಗಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದಲ್ಲಿ ಅವರನ್ನು ಬೇರೆ ಆಸ್ಪತ್ರೆಗೆ ಕಳುಹಿಸುವ ಏರ್ಪಾಟನ್ನೂ ಮಾಡಲಾಗುತ್ತಿದೆ.  ಕೊರೋನಾ ಬಗ್ಗೆ ಅತಿಯಾದ ಭಯ ಹೊಂದಿರುವ ಜನರು ಏನೇ ಆದರೂ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಿರುವ ಈ ಸಂದರ್ಭದಲ್ಲಿ ಮೊಬೈಲ್ ಕ್ಲಿನಿಕ್ ಗ್ರಾಮೀಣ ಭಾಗದ ಜನತೆಗೆ ಸಂಜೀವಿನಿಯಾಗಿದೆ.  

ಈ ಕುರಿತಂತೆ ವಾರ್ತಾಭಾರತಿಯೊಂದಿಗೆ ಮಾತನಾಡಿದ ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀಝರ‍್ರಹ್ಮಾನ್ ರುಕ್ನುದ್ದೀನ್ ನದ್ವಿ, ಭಟ್ಕಳದಲ್ಲಿ ಸಾಮಾಜಿಕ ಮತ್ತು ಮಾನವೀಯ ಸೇವೆಯಲ್ಲಿ ತೊಡಗಿಸಿಕೊಂಡಿರುವ  ಪ್ರಮುಖ ಸಂಘ ಸಂಸ್ಥೆಗಳು ಕೋವಿಡ್ ಸಂದರ್ಭದಲ್ಲಿ ಸಮಾಜದ ಎಲ್ಲರನ್ನು ಆರೋಗ್ಯವಂತರಾಗಿ ಕಾಣಲು ಮತ್ತು ಕೋವಿಡ್ ಕುರಿತ ಭಯವನ್ನು ನಿವಾರಿಸಲು ಜನರ ಮನೆಗೆ ಆರೋಗ್ಯ ಸೇವೆ ನೀಡಲು ನಿರ್ಧರಿಸಿದ್ದು ಅದರಂತೆ ನಾವು ಪ್ರತಿದಿನ ವಿವಿಧ ಭಾಗಗಳಲ್ಲಿ ಸಂಚರಿಸಿ ಜನರ ಆರೋಗ್ಯವನ್ನು ವಿಚಾರಿಸುತ್ತೇವೆ. ಧರ್ಮ, ಜಾತಿ, ಭಾಷೆ ಯಾವುದನ್ನೂ ಲೆಕ್ಕಿಸದೆ ಮನುಷ್ಯರೆಲ್ಲರೂ ಒಂದೇ ಕುಟುಂಬ ಎಂಬ ನೆಲೆಯಲ್ಲಿ ಎಲ್ಲರಿಗೂ ಆರೋಗ್ಯ ಸಿಗುವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಯಾವುದೇ ಸ್ವಾರ್ಥವಿರದೆ ದೇವಸಂಪ್ರೀತಿಯೆ ನಮ್ಮ ಉದ್ದೇಶವಾಗಿದೆ ಎಂದರು ತಿಳಿಸಿದ್ದಾರೆ.

Writer - ವರದಿ: ಎಂ.ಆರ್.ಮಾನ್ವಿ

contributor

Editor - ವರದಿ: ಎಂ.ಆರ್.ಮಾನ್ವಿ

contributor

Similar News