ಮುರುಡೇಶ್ವರ ಎಲ್‍ಇಡಿ ವಿದ್ಯುತ್ ಅಲಂಕಾರಕ್ಕೆ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿ

Update: 2021-06-18 16:55 GMT

ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದ ಶಿವನ ಮೂರ್ತಿಗೆ ಮಾಡಲಾದ ಎಲ್‍ಇಡಿ ವಿದ್ಯುದಲಂಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿದೆ.

ಅಮೆರಿಕಾದ ಇ ಗ್ಲೋಬಲ್ ಫಿಲಿಪ್ಸ್ ಆಯೋಜಿಸಿದ್ದ ಸರ್ಟಿಫೈಡ್ ಸಿಸ್ಟಮ್ ಇಂಟಿಗ್ರೇಟರ್ ಸಮಿಟ್‍ನಲ್ಲಿ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಈ ಸ್ಪರ್ಧೆಯಲ್ಲಿ ಜಗತ್ತಿನ 24 ಪ್ರಾಜೆಕ್ಟ್ ಗಳಿಗೆ ಒಟ್ಟು 6,871 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಮುರ್ಡೇಶ್ವರದಲ್ಲಿ ಸ್ಥಾಪಿತವಾಗಿರುವ, ಏಷ್ಯದಲ್ಲೇ ಎರಡನೇಯ ಅತಿ ದೊಡ್ಡ ಬೃಹತ್ ಶಿವನ ಮೂರ್ತಿಗೆ ಮಾಡಲಾದ ವಿದ್ಯುದಲಂಕಾರಕ್ಕೆ 2500 ಮತಗಳು ಬಿದ್ದಿದ್ದವು. ಹೀಗಾಗಿ ಈ ವಿದ್ಯುತ್ ಅಲಂಕಾರ ಮಾಡಿದ ಬೆಂಗಳೂರಿನ ಸಂಚನಾ ಗುರು ಡಿಸ್ಟ್ರಿಬ್ಯೂಟರ್ಸ್ ಗೆ ಈ ವರ್ಷದ ಪ್ರಶಸ್ತಿ ಘೋಷಿಸಲಾಗಿದೆ.

ಅರಬ್ಬಿ ಸಮುದ್ರದ ದಡದಲ್ಲಿ ಸ್ಥಾಪಿತವಾಗಿರುವ ಮುರ್ಡೇಶ್ವರದ ಶಿವನ ಬೃಹತ್  ಪ್ರತಿಮೆಯು 123 ಅಡಿ (37 ಮೀ.) ಎತ್ತರವಿದೆ. ಇದು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಯಾಗಿದೆ. ಇಲ್ಲಿನ ವಾಸ್ತುಶಿಲ್ಪ, ಧಾರ್ಮಿಕ ಮಹತ್ವ, ಇತಿಹಾಸದಿಂದಾಗಿ ಈ ದೇವಾಲಯವು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

 2020ರ ಸೆಪ್ಟೆಂಬರ್ ನಲ್ಲಿ ಸಂಚನಾ ಗುರು ಡಿಸ್ಟ್ರಿಬ್ಯೂಟರ್ ಮೂಲಕ ನವೀನ್ ಮೇಸ್ತಾ ಎನ್ನುವವರು ಈ ಲೈಟಿಂಗ್ ಡಿಸೈನ್ ಮಾಡಿದ್ದರು. ಈ ವಿದ್ಯುತ್ ಅಲಂಕಾರದಿಂದಾಗಿ ರಾತ್ರಿಯ ವೇಳೆ ಮೂರ್ತಿಯು ಅಚ್ಚಾಗಿ ನೀಲಿ ಬೆಳಕಿನಲ್ಲಿ ಗೋಚರಿಸುತ್ತದೆ. ಇದು ಪ್ರವಾಸಿಗರ ಪ್ರಮುಖ ಕೇಂದ್ರಬಿಂದುವೂ ಆಗಿದೆ ಎಂದು ವಿವರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News