​ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಚಾರ: ಆರೋಪಿಯ ವಿರುದ್ಧ ಪ್ರಾಂಶುಪಾಲರಿಂದ ದೂರು

Update: 2021-06-18 17:38 GMT

ಮಂಗಳೂರು, ಜೂ.18: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಯ ಹೆಸರಿನಲ್ಲಿ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸಂದೇಶವನ್ನು ಹರಡಿ ಸಂಸ್ಥೆಯ ಹೆಸರಿಗೆ ಧಕ್ಕೆ ತರುತ್ತಿದ್ದಾನೆ ಎಂದು ಆರೋಪಿಸಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮುಹಮ್ಮದ್ ಸದಕತ್ ಮೂಡುಬಿದಿರೆ ಠಾಣೆಗೆ ದೂರು ನೀಡಿದ್ದಾರೆ.

Ka01memes ಎಂಬ ಇನ್‌ಸ್ಟಾಗ್ರಾಂ ಅಕೌಂಟ್ ಹೊಂದಿರುವ ಆರೋಪಿ ಆದಿಶಕ್ತಿ ಪ್ರಸಾದ್ ಎಂಬಾತ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹೆಸರನ್ನು ಕೆಡಿಸುವ ಉದ್ದೇಶದಿಂದ 2021ರ ಎ.24ರಂದು ತನ್ನ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ತಾನು ಮಂಗಳೂರಿನ ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ. ನಮ್ಮನ್ನು ಲಾಕ್‌ಡೌನ್ ಆದರೂ ಕಾಲೇಜಿನಲ್ಲಿ ಇರಿಸಿಕೊಂಡಿದ್ದಾರೆ. ನಮ್ಮ ತಂದೆ- ತಾಯಿ ಪೋನ್ ಮಾಡಿ ಕೇಳಿದರೂ ನಮ್ಮನ್ನು ಮನೆಗೆ ಕಳುಹಿಸಲಿಲ್ಲ. ಕೇಳಿದರೆ ಟಿಸಿ ತಗೊಂಡು ಹೋಗಿ ಬಿಡಿ, ಮತ್ತೆ ಕಾಲೇಜಿಗೆ ಕಳುಹಿಸಬೇಡಿ ಅಂತ ಹೇಳಿಬಿಟ್ಟು ಬ್ಲಾಕ್‌ ಮೇಲ್‌ ಮಾಡಿ ಹೆದರಿಸಿ ನಮ್ಮನ್ನು ಇಲ್ಲೇ ಇರಿಸಿಕೊಂಡಿದ್ದಾರೆ. ಇಲ್ಲಿ ಕೊರೋನ ಕೇಸು ತುಂಬಾ ಇದೆ. ಆದರೂ ಕಾಲೇಜಿನಲ್ಲಿ ಯಾವುದೇ ಹೆಲ್ತ್ ಮೆಶರ್ಸ್, ಹೆಲ್ತ್ ಸೇಫ್ಟಿ  ಮೆಶರ್ಸ್ ಕೂಡಾ ತಗೊಂಡಿಲ್ಲ. ಇಲ್ಲಿಗೆ ಬರುವಂತಹ ಸಿಬ್ಬಂದಿ ಅಂದರೆ ಬಸ್ ಡ್ರೈವರ್ಸ್‌, ಟೀಚರ್ಸ್‌ ಮಾಸ್ಕ್ ಹಾಕಲ್ಲ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯ ಹೆಸರಿನಲ್ಲಿ ಸುಳ್ಳು ಧ್ವನಿ ಮುದ್ರಿಕೆಯನ್ನು ರಚಿಸಿ ಸುಳ್ಳು ವಿಚಾರವನ್ನು ಇನ್‌ಸ್ಟಾಗ್ರಾಂ, ವಾಟ್ಸ್‌ಆ್ಯಪ್, ಫೇಸ್‌ಬುಕ್ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಸಂಸ್ಥೆಯ ಹೆಸರಿಗೆ ಧಕ್ಕೆ ತರುವಂತಹ ಕೃತ್ಯವನ್ನು ಎಸಗಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News