ಲೆಟರ್‌ಹೆಡ್ ದುರುಪಯೋಗಿಸಿ ಧನ ಸಂಗ್ರಹ ಆರೋಪ : ದೂರು ದಾಖಲು

Update: 2021-06-18 17:41 GMT

ಮಂಗಳೂರು, ಜೂ.18: ಮಸೀದಿಯೊಂದರ ಲೆಟರ್‌ಹೆಡ್ ದುರುಪಯೋಗಿಸಿಕೊಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಯುವತಿಯ ಮದುವೆಗಾಗಿ ಧನ ಸಂಗ್ರಹಿಸಿದ್ದಲ್ಲದೆ, ಆ ಕುಟುಂಬದ ಸದಸ್ಯರನ್ನು ಬೆದರಿಸಿ ಬಲಾತ್ಕಾರವಾಗಿ ಹಣವನ್ನು ಲಪಟಾಯಿಸಿದ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 ಹಂಡೇಲು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಎಚ್.ಎಂ. ಅಬ್ದುಲ್ ಖಾದರ್ ಹಾಜಿ ದೂರು ನೀಡಿ, ‘ಈ ಜಮಾಅತ್‌ಗೆ ಒಳಪಟ್ಟ ಪುತ್ತಿಗೆ ಗ್ರಾಮದ ಹಂಡೇಲು ವರಂಕಿಲ ಮನೆಯ ನಿವಾಸಿ ಅಬ್ದುಲ್ ಲತೀಫ್ ಎಂಬವರ ಪುತ್ರಿ ಆಯಿಶಾಳ ಮದುವೆಗೋಸ್ಕರ ಆಕೆಯ ತಾಯಿಯು ಮುಮಾಸ್ ಚ್ಯಾರಿಟಿಯವರ ಬಳಿ ಹೇಳಿಕೊಂಡಾಗ, ಆ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ತಮೀಮ್ ಎಂಬಾತ ಜಮಾಅತ್ ಅಧ್ಯಕ್ಷರ ದೃಢಪತ್ರವನ್ನು ತರುವಂತೆ ತಿಳಿಸಿದ್ದರು. ಅದರಂತೆ ಆಯಿಶಾ ಜಮಾಅತ್ ಅಧ್ಯಕ್ಷನಾದ ತನ್ನಿಂದ ದೃಢೀಕರಣ ಪತ್ರವನ್ನು ಪಡೆದುಕೊಂಡು ಮುಮಾಸ್ ಚಾರಿಟೇಬಲ್ ಟ್ರಸ್ಟ್‌ಗೆ ನೀಡಿದ್ದರು. ಆ ಬಳಿಕ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯು ಆಯಿಶಾಳ ಧ್ವನಿಮುದ್ರಿತ ವಿಜ್ಞಾಪನೆಯನ್ನು ವಾಟ್ಸ್‌ಆ್ಯಪ್‌ನಲ್ಲಿ ಬಿತ್ತರಿಸಿ ಆಯಿಶಾಳ ಕೆನರಾ ಬ್ಯಾಂಕ್ ಮೂಡುಬಿದಿರೆ ಶಾಖೆಯ ಖಾತೆ ಗೆ ಹಣ ಹಾಕುವಂತೆ ಕೋರಿದ್ದರು. ಅದರಂತೆ 28,75,000 ರೂ.ಸಂಗ್ರಹವಾಗಿತ್ತು. ಬಳಿಕ ಆರೋಪಿ ಮುಹಮ್ಮದ್ ಇಕ್ಬಾಲ್ ತಮೀಮ್, ವಧು ಆಯಿಶಾ ಮತ್ತವರ ತಾಯಿಗೆ ಹಣ ನೀಡುವಂತೆ ಒತ್ತಾಯಿಸಿ ಎರಡು ಖಾಲಿ ಚೆಕ್‌ಗಳನ್ನು ಪಡೆದುಕೊಂಡಿದ್ದ. ಈ ಚೆಕ್‌ಗಳಲ್ಲಿ ಸಹಿ ವ್ಯತ್ಯಾಸ ಇದ್ದುದರಿಂದ ಹಣ ಡ್ರಾ ಮಾಡಲು ಸಾಧ್ಯವಾಗದೆ ಇದ್ದಾಗ ಆರೋಪಿಯು ನಾಲ್ವರು ಅಪರಿಚಿತರನ್ನು ಆಯಿಶಾಳ ಮನೆಗೆ ಕರೆದುಕೊಂಡು ಹೋಗಿ ಆಯಿಶಾ ಮತ್ತವರ ತಾಯಿಯನ್ನು ಬೆದರಿಸಿ ಸುಳ್ಳು ಕೇಸು ಮಾಡುವುದಾಗಿ ಬೆದರಿಕೆ ಹಾಕಿ ಒತ್ತಾಯದಿಂದ ಆಯಿಶಾ ಬ್ಯಾಂಕ್ ಶಾಖೆಯಿಂದ 8,75,000 ರೂ.ವನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿ  ಮೋಸ, ವಂಚನೆ ಮತ್ತು ನಂಬಿಕೆ ದ್ರೋಹ ಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News