ಕೋವಿಡ್ ಪ್ರಕರಣ: ಎರಡೂವರೆ ತಿಂಗಳ ಬಳಿಕ ಅಗ್ರಸ್ಥಾನದಿಂದ ಇಳಿದ ಭಾರತ

Update: 2021-06-19 03:40 GMT

ಹೊಸದಿಲ್ಲಿ, ಜೂ.19: ಸತತ ಎರಡೂವರೆ ತಿಂಗಳ ಕಾಲ ಹೊಸ ಕೋವಿಡ್-19 ಪ್ರಕರಣಗಳಲ್ಲಿ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದ್ದ ಭಾರತ, ಇದೀಗ ಕೆಳಕ್ಕಿಳಿದಿದ್ದು, ಮತ್ತೆ ಬ್ರೆಝಿಲ್‌ ಮತ್ತೆ ಅತ್ಯಧಿಕ ಪ್ರಕರಣಗಳೊಂದಿಗೆ ಮೊದಲ ಸ್ಥಾನಕ್ಕೇರಿದೆ.

ಕಳೆದ ಏಳು ದಿನಗಳಲ್ಲಿ ಬ್ರೆಝಿಲ್‌ನಲ್ಲಿ 4,88,882 ಹೊಸ ಪ್ರಕರಣಗಳು ವರದಿಯಾಗಿದ್ದು, ಭಾರತದಲ್ಲಿ 4,88,626 ಪ್ರಕರಣಗಳು ಸೇರ್ಪಡೆಯಾಗಿವೆ ಎಂದು ವರ್ಲ್ಡೋಮೀಟರ್ಸ್‌.ಇನ್ಫೋ ಅಂಕಿಅಂಶಗಳಿಂದ ತಿಳಿದುಬರುತ್ತದೆ. ಕಳೆದ ಮಾರ್ಚ್ ಬಳಿಕ ಏಳು ದಿನಗಳ ದೈನಿಕ ಸರಾಸರಿಯಲ್ಲಿ ಭಾರತವನ್ನು ಜಗತ್ತಿನ ಬೇರೆ ದೇಶ ಹಿಂದಿಕ್ಕಿರುವುದು ಇದೇ ಮೊದಲು.

ಬ್ರೆಝಿಲ್‌ನಲ್ಲಿ ಕಳೆದ ಮಾರ್ಚ್‌ನಿಂದಲೂ ದೈನಿಕ ಪ್ರಕರಣಗಳ ಸಂಖ್ಯೆ 60 ಸಾವಿರದಿಂದ 90 ಸಾವಿರದ ಮಧ್ಯೆ ಇದೆ. ಭಾರತದಲ್ಲಿ ಮೇ 8ರಂದು ಗರಿಷ್ಠ ಪ್ರಕರಣಗಳು ವರದಿಯಾದ ಬಳಿಕ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ.

ಶುಕ್ರವಾರ ಭಾರತದಲ್ಲಿ ಏಳು ದಿನಗಳ ಸರಾಸರಿ ಪ್ರಕರಣಗಳ ಸಂಖ್ಯೆ 66,600ಕ್ಕೆ ಇಳಿದಿದೆ. ಇದು ಮೇ 8ರಂದು ದಾಖಲಾದ 3,91,263ಕ್ಕೆ ಹೋಲಿಸಿದರೆ ಆರನೇ ಒಂದು ಪಾಲು. ಅಂತೆಯೇ ದಿನಗಳ ಸರಾಸರಿ ಸಾವಿನ ಸಂಖ್ಯೆ ಮೇ 16ಕ್ಕೆ 4,040 ಇದ್ದುದು ಇದೀಗ 1,399ಕ್ಕೆ ಇಳಿದಿದೆ.

ಶುಕ್ರವಾರ 60,959 ಹೊಸ ಪ್ರಕರಣಗಳು ಮತ್ತು 1,200 ಸಾವು ವರದಿಯಾಗಿದೆ. ಇದರ ಜತೆಗೆ ಮಹಾರಾಷ್ಟ್ರ 450 ಹಳೆಯ ಸಾವಿನ ಲೆಕ್ಕವನ್ನು ಶುಕ್ರವಾರ ಪ್ರಕಟಿಸಿದೆ. ಇದನ್ನು ಹೊರತುಪಡಿಸಿ ಮಹಾರಾಷ್ಟ್ರದಲ್ಲಿ 198 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದು ತಮಿಳುನಾಡು ಹೊರತುಪಡಿಸಿದರೆ ದೇಶದಲ್ಲೇ ಎರಡನೇ ಗರಿಷ್ಠ. ತಮಿಳುನಾಡಿನಲ್ಲಿ 287 ಸೋಂಕಿತರು ಮೃತಪಟ್ಟಿದ್ದಾರೆ. ಈ ಎರಡು ರಾಜ್ಯಗಳನ್ನು ಹೊರತುಪಡಿಸಿದರೆ ದೇಶದಲ್ಲೇ 100ಕ್ಕಿಂತ ಹೆಚ್ಚು ಸಾವು ವರದಿಯಾದ ಏಕೈಕ ರಾಜ್ಯ ಕರ್ನಾಟಕ. ಕರ್ನಾಟಕದಲ್ಲಿ ಶುಕ್ರವಾರ 168 ಮಂದಿ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News