ದ.ಕ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಿಲ್ಲ, ತಪಾಸಣೆ ಹೆಚ್ಚಿದೆ: ಜಿಲ್ಲಾಧಿಕಾರಿ

Update: 2021-06-19 05:50 GMT

► ಅಶಕ್ತರ ಮನೆಬಾಗಿಲಿಗೆ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ

ಮಂಗಳೂರು, ಜೂ.19: ದ.ಕ. ಜಿಲ್ಲೆಯಲ್ಲಿ ಕೊರೋನ ಪಾಸಿಟಿವಿಟಿ ದರ ಹೆಚ್ಚಳವಾಗಿಲ್ಲ. ಬದಲಾಗಿ ಒಂದು ವಾರದಿಂದೀಚೆಗೆ ಈ ದರದಲ್ಲಿ ಏರಿಳಿತ ಕಂಡುಬರುತ್ತಿದೆ. ಅದಕ್ಕಿಂತಲೂ ಮುಖ್ಯವಾಗಿ ಹಿಂದೆಲ್ಲಾ ದಿನಕ್ಕೆ ಗರಿಷ್ಠ 3ರಿಂದ ನಾಲ್ಕು ಸಾವಿರದಷ್ಟಿದ್ದ ಕೊರೋನ ತಪಾಸಣೆ (ಐಟಿಪಿಸಿಆರ್) ಪ್ರಮಾಣ ಇದೀಗ ಹೆಚ್ಚಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಇಂದು ದ.ಕ. ಜಿಲ್ಲಾಡಳಿತ, ಇಂಡಿಯನ್ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕ, ರೋಟರಿ ಮಂಗಳೂರು ಹಾಗೂ ಬ್ಯಾಂಕ್ ಆಫ್ ಬರೋಡಾ ಸಹಯೋಗದೊಂದಿಗೆ ಆರೋಗ್ಯ ಕಾರ್ಯಕರ್ತರು ವಾಹನದ ಮೂಲಕ ಅಶಕ್ತರಿಗೆ ಲಸಿಕೆ ನೀಡುವ ಸಂಚಾರಿ ಲಸಿಕಾ ಕೇಂದ್ರಕ್ಕೆ ಅವರು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ ಎಂಬ ಆತಂಕ ಜನರಿಗೆ ಬೇಡ. ಶುಕ್ರವಾರ ದಿನವೊಂದರಲ್ಲಿ 11 ಸಾವಿರ ಆರ್‌ಟಿಪಿಸಿಆರ್ ಪರೀಕ್ಷೆ ನಡೆದಿದೆ. ಹಾಗಾಗಿ ಪಾಸಿಟಿವಿಟಿ ದರ ಹೆಚ್ಚಳದಂತೆ ಕಂಡುಬರುತ್ತಿದೆ. ಕಳೆದ ವಾರ ಶೇ.18ರಷ್ಟಿದ್ದ ದರ ಈ ವಾರ ಶೇ.9ಕ್ಕೆ ಇಳಿಕೆಯಾಗಿದೆ ಎಂದು ಅವರು ಹೇಳಿದರು.

ದ.ಕ. ಜಿಲ್ಲಾಡಳಿತದ ವತಿಯಿಂದ ರೆಡ್‌ಕ್ರಾಸ್ ಮೂಲಕ ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಚಾಲಕ ನಿರ್ವಾಹಕರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ದ.ಕ. ಜಿಲ್ಲಾ ರೆಡ್‌ಕ್ರಾಸ್ ಯಾವುದೇ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡುತ್ತಿದೆ. ಎನ್‌ಆರ್‌ಐಗಳಿಗೆ ಲಸಿಕೆ ಕಾರ್ಯವನ್ನೂ ಉತ್ತಮವಾಗಿ ನಿರ್ವಹಿಸಿದ್ದಾರೆ. ಸೋಮವಾರದಿಂದ ಬಳಿಕ ಹೆಚ್ಚಿನ ಪ್ರಮಾಣದ ಲಸಿಕೆ ಜಿಲ್ಲೆಗಳಿಗೆ ಲಭ್ಯವಾಗಲಿದೆ. ಆ ಬಳಿಕ ಇನ್ನೂ ಕೂಡಾ ಉತ್ತಮವಾಗಿ ಯೋಜನೆ ರೂಪಿಸಿಕೊಂಡು ಎಲ್ಲರಿಗೂ ಲಸಿಕೆ ನೀಡಲು ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಈ ಸಂಚಾರಿ ಲಸಿಕಾ ಕೇಂದ್ರವು ಪೂರ್ವ ನೋಂದಣಿ ಮಾಡಿಕೊಂಡು ಒಂದು ಪ್ರದೇಶದಲ್ಲಿ 10ಕ್ಕಿಂತ ಅಧಿಕ ಸಂಖ್ಯೆಯಲ್ಲಿ ದೀರ್ಘಕಾಲೀನ ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಮನೆಯಿಂದ ಹೊರಬರಲಾಗದ ವಯೋವೃದ್ಧರು ಹಾಗೂ ಎಂಡೋ ಪೀಡಿತರಿಗೆ ಲಸಿಕೆ ನೀಡುವ ಕಾರ್ಯವನ್ನು ಹಂತ ಹಂತವಾಗಿ ಮಾಡಲಿದೆ ಎಂದು ಅವರು ಹೇಳಿದರು.

ಬ್ಯಾಂಕ್ ಆಫ್ ಬರೋಡಾದ ಡಿಜಿಎಂ ಗಾಯತ್ರಿ ಮಾತನಾಡಿ, ಜಿಲ್ಲಾಡಳಿತ ರೆಡ್‌ಕ್ರಾಸ್, ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಬ್ಯಾಂಕ್ ಕೂಡಾ ಅಶಕ್ತರಿಗೆ ಮನೆ ಬಳಿ ತೆರಳಿ ಲಸಿಕೆ ನೀಡುವ ಕಾರ್ಯದಲ್ಲಿ ಭಾಗಿಯಾಗುತ್ತಿರುವ ಬಗ್ಗೆ ಹೆಮ್ಮೆ ಎಂದರು.

ಜಿಲ್ಲಾ ರೆಡ್‌ಕ್ರಾಸ್ ವತಿಯಿಂದ ಈಗಾಗಲೇ ಎನ್‌ಆರ್‌ಐಗಳಿಗೆ ಲಸಿಕೆ ನೀಡುವ ಕಾರ್ಯ ನಡೆಸಲಾಗಿದೆ. ಇಂದು ಆಟೋ ರಿಕ್ಷಾ ಬಸ್ಸು ಚಾಲಕರಿಗೆ ಲಸಿಕೆಯನ್ನು ನೀಡಲಾಗುತ್ತಿದೆ. ಇದೀಗ ಬಹು ಮುಖ್ಯಮುಖ್ಯವಾಗಿ ಅಶಕ್ತರಿಗೆ ಮನೆಗಳಿಗೆ ತೆರಳಿ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಈ ಕಾರ್ಯ ಹಂತ ಹಂತವಾಗಿ ಇಡೀ ಜಿಲ್ಲಾದ್ಯಂತ ನಡೆಸಲು ಪ್ರಯತ್ನಿಸಲಾಗುವುದು ಎಂದು ರೆಡ್‌ಕ್ರಾಸ್ ಜಿಲ್ಲಾಧ್ಯಕ್ಷ ಶಾಂತಾರಾಮ ಶೆಟ್ಟಿ ತಿಳಿಸಿದರು.


ಅನ್‌ಲಾಕ್ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ

ಜಿಲ್ಲೆಯಲ್ಲಿ ಅನ್‌ಲಾಕ್‌ಗೆ ಜನರ ಸಹಕಾರ ಬಹು ಮುಖ್ಯ. ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧಾರಣೆ, ಗುಂಪಿನಲ್ಲಿ ಇರುವುದನ್ನು ತಪ್ಪಿಸುವ ಕೆಲಸ ಮೂಲಕ ಕೊರೋನ ನಿಯಂತ್ರಣ ನಿಯಮ ಪಾಲನೆ ಅತೀ ಅಗತ್ಯವಾಗಿದೆ. ಇಂದು(ಜೂ.19) ಮಧ್ಯಾಹ್ನ 12 ಗಂಟೆಗೆ ಜನಪ್ರತಿನಿಧಿಗಳು ಹಾಗೂ ಸಿಎಂ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಅನ್‌ಲಾಕ್ ಬಗ್ಗೆ ನಿರ್ಧರಿಸಲಾಗುವುದು.

-ಡಾ. ರಾಜೇಂದ್ರ ಕೆ.ವಿ, ಜಿಲ್ಲಾಧಿಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News