ಬಿಜೆಪಿ ಕೌನ್ಸಿಲರ್ ನ 'ಎಲ್‍ಕೆಜಿ ಮೇಯರ್' ಹೇಳಿಕೆಗೆ ತಿರುಗೇಟು ನೀಡಿದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್

Update: 2021-06-19 06:50 GMT

ತಿರುವನಂತಪುರಂ: ರಾಜ್ಯದಲ್ಲಿ ಮೇಯರ್ ಸ್ಥಾನ ಅಲಂಕರಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂದು ಕಳೆದ ವರ್ಷ ಸುದ್ದಿಯಾಗಿದ್ದ ತಿರುವನಂತಪುರಂ ಮೇಯರ್ ಆರ್ಯ ರಾಜೇಂದ್ರನ್, ತಮ್ಮ ವಯಸ್ಸನ್ನು ಅಣಕಿಸಿ  ಪೋಸ್ಟ್ ಮಾಡಿದ ಬಿಜೆಪಿ ಕೌನ್ಸಿಲರ್ ಒಬ್ಬರಿಗೆ ತಿರುಗೇಟು ನೀಡಿ ಸಾಮಾಜಿಕ ಜಾಲತಾಣಿಗರಿಂದ ಭೇಷ್ ಎನಿಸಿಕೊಂಡಿದ್ದಾರೆ. ಆಕೆ ಕೌನ್ಸಿಲರ್ ಪೋಸ್ಟ್ ಗೆ ನೀಡಿರುವ ವೀಡಿಯೋ ಪ್ರತಿಕ್ರಿಯೆ ವೈರಲ್ ಆಗಿದೆ.

ಬಿಜೆಪಿ ಕೌನ್ಸಿಲರ್ ಕರಮನ ಅಜಿತ್ ಅವರು ಆರ್ಯ ಅವರನ್ನು  ಎಕೆಜಿ ಕೇಂದ್ರದ ಎಲ್‍ಕೆಜಿ ಮಗು ಎಂದು ವ್ಯಂಗ್ಯವಾಡಿದ್ದರು. ಕೇರಳದ ಸಿಪಿಎಂ ಮುಖ್ಯ ಕಾರ್ಯಾಲಯವನ್ನು ಎಕೆಜಿ ಸೆಂಟರ್ ಎಂದು ಕರೆಯಲಾಗುತ್ತದೆ.

ಜೂನ್ 17ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಅಜಿತ್ ಮತ್ತೆ ಅವರನ್ನು ಎಲ್‍ಕೆಜಿ ಮಗು ಎಂದೇ  ವ್ಯಂಗ್ಯವಾಡಿದ್ದರಲ್ಲದೆ ಆಕೆಯನ್ನು ಮೇಯರ್ ಮಗು ಹಾಗೂ ಕಾರ್ಪೊರೇಷನ್ ಮಕ್ಕಳ ಪಾರ್ಕ್ ಅಲ್ಲ ಹಾಗೂ ಜನರ ಹಣವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವ ಸ್ಥಳ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್ಯ, "ಈ ಹಿಂದೆ ಕೂಡ ಹಲವಾರು ಬಾರಿ ನನ್ನನ್ನು ವೈಯಕ್ತಿಕವಾಗಿ ಟೀಕಿಸಿದ್ದೀರಿ ಅಥವಾ ನನ್ನ ವಯಸ್ಸು ಹಾಗೂ ಪ್ರಬುದ್ಧತೆಯ ವಿಚಾರ ಮುಂದಿಟ್ಟುಕೊಂಡು ಟೀಕಿಸಿದ್ದೀರಿ, ಆದರೆ ಈಗ ನಾನು ಇದನ್ನು ಹೇಳುವುದು ಅನಿವಾರ್ಯವಾಗಿದೆ.  ನಿಮಗೆ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ, ನಾನು ಈ ವಯಸ್ಸಿನಲ್ಲಿ ಮೇಯರ್ ಆಗಿದ್ದರೆ, ಅಂತೆಯೇ ಹೇಗೆ ಕಾರ್ಯನಿರ್ವಹಿಸಬೇಕೆಂಬುದು ನನಗೆ ತಿಳಿದಿದೆ ಹಾಗೂ ಇಂತಹ ವ್ಯವಸ್ಥೆಯಲ್ಲಿಯೇ ನಾನು ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಬಲ್ಲೆ" ಎಂದು ಹೇಳಿದರು.

"ನಿಮ್ಮ ಫಾಲೋವರ್ಸ್ ಕಮೆಂಟ್‍ಗಳನ್ನು ನಾನು ತೋರಿಸಿದರೆ ಹಾಗೂ ಫೇಸ್ ಬುಕ್, ವಾಟ್ಸ್ಯಾಪ್‍ನಲ್ಲಿ ಯುವಜನರು ಸೇರಿದಂತೆ ಹಲವರು ಪೋಸ್ಟ್ ಮಾಡುವ ಅವಹೇಳನಕಾರಿ ಕಮೆಂಟ್‍ಗಳನ್ನು ಗಮನಿಸಿದರೆ, ಈ ಮೇಯರ್ ಕೂಡ ನಿಮ್ಮ ಮನೆಯಲ್ಲಿರುವ ಸಹೋದರಿಯರು, ತಾಯಂದಿರಂತೆ ಎಂದು ನಿಮಗೆ ನೆನಪಾಗಬೇಕು" ಎಂದಿದ್ದಾರೆ.

ವಿಪಕ್ಷಗಳು ಆಕೆಗೆ ಅಡ್ಡಿ ಪಡಿಸಲು ಯತ್ನಿಸಿದರೂ ಆಕೆ ತನ್ನ ಮಾತುಗಳನ್ನು ದಿಟ್ಟತನದಿಂದ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News